ಕೋಟ: ಬಿ.ಆರ್. ಸೇವಾ ಟ್ರಸ್ಟ್ ಅಲ್ತಾರು ಇವರ ಆಶ್ರಯದಲ್ಲಿ ಸ್ಯಾಬ್ರಕಟ್ಟೆ ಸ್ವಾಗತ್ ಹಾಲ್‌ನಲ್ಲಿ ಪ್ರತಿಭಾವಂತ ವಿದ್ಯಾರ್ಥಿ ಗಳಿಗೆ ಸಹಾಯಧನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ರವಿವಾರ ನಡೆಯಿತು.
ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಮೊಂಬತ್ತಿ ಬೆಳಗಿ ದ.ಸಂ.ಸ. ಭೀಮ ಘರ್ಜನೆ ಸಂಸ್ಥಾಪಕ ರಾಜ್ಯಾಧ್ಯಕ್ಷ ಉದಯ ಕುಮಾರ್ ತಲ್ಲೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಈ ಕಾರ್ಯ ಕ್ರಮ ಶ್ಲಾಘನೀಯ. ಟ್ರಸ್ಟ್ ಕಾರ್ಯ ಅಭಿನಂದನಾರ್ಹ ಎಂದರು.
ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಬಳಿಕ ಸನ್ಮಾನ ಸ್ವೀಕರಿಸಿ ಮಾತ ನಾಡಿ, ಅಂಬೇಡ್ಕರ್ ನೀಡಿರುವ ಸ್ವಾತಂತ್ರ್ಯ, ಸಹೋದರತೆ, ಸಮಾನತೆಯನ್ನು ಬೋಧಿಸುವ ಸಂವಿಧಾನವೇ ಶ್ರೇಷ್ಠ ಧರ್ಮ ಎಂದು ಪ್ರತಿಪಾದಿಸಿದರು.
ನ್ಯಾಯಾಂಗ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿದ ರವಿಕಿರಣ್ ಮುರ್ಡೇಶ್ವರ, ಪಿಎಚ್‌ಡಿ ಪದವೀಧರರಾದ ಡಾ.ನಾಗರತ್ನ ಕುಮಾರಸ್ವಾಮಿ, ಡಾ.ಕಲಾವತಿ ಕಡಂಗೋಡು ಇವರನ್ನ ಸನ್ಮಾನಿಸಲಾಯಿತು. ಸುಮಾರು 15 ಕ್ಕೂ ಹೆಚ್ಚು ವಿದ್ಯಾರ್ಥಿ ಗಳಿಗೆ ಪ್ರೋತ್ಸಾಹಧನದ ಚೆಕ್ ವಿತರಿಸಲಾಯಿತು.
ಬಿ.ಆರ್.ಸೇವಾ ಟ್ರಸ್ಟ್ ಅಲ್ತಾರು ಅಧ್ಯಕ್ಷ ಚಂದ್ರ ಅಲ್ತಾರು ಅಧ್ಯಕ್ಷತೆ ವಹಿಸಿದ್ದರು. ಯಡ್ತಾಡಿ ಗ್ರಾಪಂ ಅಧ್ಯಕ್ಷ ಎಚ್. ಪ್ರಕಾಶ್ ಶೆಟ್ಟಿ ಹೇರಾಡಿ, ಬ್ರಹ್ಮಾವರ ತಾಲೂಕು ಉಪ ತಹಶೀಲ್ದಾರ್ ರಾಘವೇಂದ್ರ ಎಚ್. ನಾಯಕ್, ಶ್ರೀಕ್ಷೇತ್ರ ಕಾಜ್ರಳ್ಳಿ ಆಡಳಿತ ಮೊಕ್ತೇಸರ ನಿರಂಜನ ಹೆಗ್ಡೆ ಅಲ್ತಾರು, ಲಯನ್ಸ್ ಜಿಲ್ಲೆ 317ಸಿ ಮಾಜಿ ಗವರ್ನರ್ ವಿಶ್ವನಾಥ ಶೆಟ್ಟಿ, ಲೇಖಕ ಶ್ರೀರಾಮ ದಿವಾಣ, ಕೃಷ್ಣ ಅಲ್ತಾರ್, ಶೇಖರ ಆರ್ಡಿ, ರಾಮ ಅಲ್ತಾರ್, ಜಗನ್ನಾಥ ಕೊಟಂಬೈಲ್, ನಾಗರಾಜ್ ಚೇರ್ಕಾಡಿ ಉಪಸ್ಥಿತರಿದ್ದರು.
ಪೂರ್ವಿಕ ಅಲ್ತಾರು ಸ್ವಾಗತಿಸಿದರು. ಸತೀಶ್ ಸೂರ್ಗೋಳಿ ಪ್ರಾಸ್ತಾವಿಕ ಮಾತನಾಡಿದರು. ರಾಘು ಶೀರೂರು ನಿರೂಪಿಸಿದರು.