ಬೆಂಗಳೂರು: ‘ಕೋವಿಡ್-19 ಸೋಂಕು ಉಲ್ಬಣ ಸಂಬಂಧಿಸಿದಂತೆ ಕೇಂದ್ರ ಸರಕಾರದ ಸೂಚನೆಯ ಮೇರೆಗೆ ಸದ್ಯಕ್ಕೆ ಗಡಿ ನಿಬಂಧನೆ, ಕ್ವಾರಂಟೈನ್‍ನಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿಲ್ಲ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ.
ಬುಧವಾರ ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ನೇತೃತ್ವದಲ್ಲಿ ನಡೆದ ಎಲ್ಲ ರಾಜ್ಯಗಳ ಆರೋಗ್ಯ ಸಚಿವರ ವರ್ಚುಯಲ್ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿಭಾಗದಲ್ಲಿ ನಿಬಂಧನೆಗಳನ್ನು ವಿಧಿಸುವುದಾಗಲೀ, ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಪ್ರಾಥಮಿಕ ಪರೀಕ್ಷೆ ನಡೆಸುವ ಸಂದರ್ಭ ಉದ್ಭವಿಸಿಲ್ಲ ಎಂದು ವಿವರಿಸಿದರು.
ಪಿಎಂ ಕೇರ್ ನಿಧಿಯಡಿ ಸ್ಥಾಪಿಸಲಾಗಿರುವ ಪಿಎಸ್‍ಎ ಆಮ್ಲಜನಕ ಉತ್ಪಾದಕ ಘಟಕಗಳ ನಿರ್ವಹಣಾ ವೆಚ್ಚ ದುಬಾರಿಯಾಗುತ್ತಿದ್ದು, ಅದಕ್ಕೆ ನೆರವು ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಿದ್ದೇವೆ. ಆರ್ ಟಿಪಿಸಿಆರ್ ಪರೀಕ್ಷೆಗೆ ಮಾದರಿ ಸಂಗ್ರಹಿಸುವ ರಾಸಾಯನಿಕ ದ್ರವವನ್ನೊಳಗೊಂಡ ಕೊಳವೆಗಳ ಕೊರತೆ ಇದೆ. ಅವುಗಳನ್ನು ಒದಗಿಸುವಂತೆ ಮನವಿ ಮಾಡಿದ್ದೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಗುರುವಾರ(ಡಿ.21) ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪಿಪಿಇ ಕಿಟ್, ಮಾಸ್ಕ್ ಸೇರಿದಂತೆ ಇತರೆ ವ್ಯವಸ್ಥೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ತುರ್ತು ಲಭ್ಯತೆ ಹಾಗೂ ಮುಂದಿನ ಮೂರು ತಿಂಗಳ ಬೇಡಿಕೆ ಅಂದಾಜಿಸಿ ಪೂರ್ವ ಸಿದ್ಧತೆ ಕೈಗೊಳ್ಳಲಾಗುವುದು. ಶನಿವಾರದ ವೇಳೆಗೆ 5ಸಾವಿರದಷ್ಟು ಕೋವಿಡ್ ಪರೀಕ್ಷೆಗಳನ್ನು ಮಾಡುವ ಸಾಮಥ್ರ್ಯ ಅಭಿವೃದ್ಧಿಪಡಿಸಲಾಗುವುದು ಎಂದರು.
ಕೋವಿಡ್ ದೈನಂದಿನ ದತ್ತಾಂಶಗಳನ್ನು ದಾಖಲಿಸಲು ಈ ಮೊದಲು ಅಸ್ತಿತ್ವದಲ್ಲಿದ್ದ ಐಸಿಎಂಆರ್ ವೆಬ್ ಪೋರ್ಟಲ್ ಸ್ಥಗಿತಗೊಂಡಿದ್ದು, ಅದನ್ನು ಮತ್ತೆ ಸಕ್ರಿಯಗೊಳಿಸಬೇಕೆಂದು ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಜೆಎನ್-1 ಉಪತಳಿ ಅಷ್ಟು ಅಪಾಯಕಾರಿಯಲ್ಲ ಎಂಬ ಮಾಹಿತಿ ಇದೆ ಎಂದ ಅವರು, ಆತಂಕ ಬೇಡ ಎಂಬ ಸೂಚನೆಯಿದ್ದು, ಮುಂಜಾಗ್ರತೆ ವಹಿಸುವಂತೆ ಸಲಹೆ ನೀಡಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಸ್ವಯಂ ಪ್ರೇರಿತವಾಗಿ ಮಾಸ್ಕ್ ಧರಿಸುವುದು ಸೂಕ್ತ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಸಿಬ್ಬಂದಿಗಳು ಹಾಗೂ ವೈದ್ಯರು ಮಾಸ್ಕ್ ಧರಿಸಲು ಸೂಚಿಸಲಾಗಿದೆ ಎಂದು ಹೇಳಿದರು.
ಕೋವಿಡ್ ಸೋಂಕು ಪತ್ತೆಗೆ ಆರ್ ಟಿಪಿಸಿಆರ್ ಪರೀಕ್ಷೆಯನ್ನು ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನಡೆಸಲಾಗುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಹಿಂದಿನ ದರವೇ ಮುಂದುವರೆಯುತ್ತಿದೆ. ನಾಳೆ ಮುಖ್ಯಮಂತ್ರಿಗಳ ನೇತೃತ್ವದದಲ್ಲಿ ನಡೆಯುತ್ತಿರುವ ತಾಂತ್ರಿಕ ಸಮಿತಿ ಸಭೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.