ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿ, ಚಾಲಕರು–ಸವಾರರ ಹೆಸರಿನಲ್ಲಿ ನೋಂದಣಿ ಮಾಡಿಸಿ ಕ್ಯಾಬ್– ಬೈಕ್ ಟ್ಯಾಕ್ಸಿ ಕಂಪನಿಗಳಿಂದ ಕಮಿಷನ್ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ನಕಲಿ ಸಿಮ್ ಕಾರ್ಡ್‌ಗಳನ್ನು ಬಳಸಿ, ಚಾಲಕರು–ಸವಾರರ ಹೆಸರಿನಲ್ಲಿ ನೋಂದಣಿ ಮಾಡಿಸಿ ಕ್ಯಾಬ್– ಬೈಕ್ ಟ್ಯಾಕ್ಸಿ ಕಂಪನಿಗಳಿಂದ ಕಮಿಷನ್ ಪಡೆದು ವಂಚಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಮನೋಜ್‌ಕುಮಾರ್, ಸಚಿನ್ ಹಾಗೂ ಶಂಕರ್ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 1055 ಸಿಮ್‌ಕಾರ್ಡ್‌ಗಳು, 15 ಮೊಬೈಲ್, 4 ಲ್ಯಾಪ್‌ಟಾಪ್, ಕಂಪ್ಯೂಟರ್ ಹಾಗೂ ಬಯೋಮೆಟ್ರಿಕ್ ಉಪಕರಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೂವರ ಪೈಕಿ ಓರ್ವ ಆರೋಪಿ ಮನೋಜ್, ಟ್ರಾವೆಲ್ಸ್ ಕಂಪನಿಗಳಿಗೆ ಕಾರು ಹಾಗೂ ಬೈಕ್‌ಗಳನ್ನು ಜೋಡಿಸುವ ಕೆಲಸ ಮಾಡುತ್ತಿದ್ದ. ಮತ್ತೊಬ್ಬ ಆರೋಪಿ ಸಚಿನ್ ಫೈನಾನ್ಸ್ ಕಂಪನಿಯೊಂದರ ಉದ್ಯೋಗಿಯಾಗಿದ್ದು, ಶಂಕರ್, ಮೊಬೈಲ್ ಸೇವಾ ಕಂಪನಿಯೊಂದರ ಸಿಮ್ ಕಾರ್ಡ್ ಹಂಚಿಕೆ ಮಾಡುತ್ತಿದ್ದ. ಮೂವರು ಸೇರಿ ವ್ಯವಸ್ಥಿತ ಜಾಲ ರೂಪಿಸಿಕೊಂಡು ಕೃತ್ಯ ಎಸಗುತ್ತಿದ್ದರು’ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಗೋವುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದ ನಾಲ್ವರ ಬಂಧನ
‘ರ‍್ಯಾಪಿಡೊ ಹಾಗೂ ಉಬರ್ ಕಂಪನಿಗಳಿಗೆ ಕಾರು–ಬೈಕ್‌ಗಳನ್ನು ಜೋಡಿಸುವ ಸಂಬಂಧ ಮನೋಜ್ ಒಪ್ಪಂದ ಮಾಡಿಕೊಂಡಿದ್ದ. ಈತನ ಸಹಾಯದಿಂದ ಸಚಿನ್ ಹಾಗೂ ಶಂಕರ್, ಕಂಪನಿ ಸಾಫ್ಟ್‌ವೇರ್‌ನಲ್ಲಿ ನಕಲಿ ಚಾಲಕರು–ಸವಾರರ ದತ್ತಾಂಶ ದಾಖಲು ಮಾಡುತ್ತಿದ್ದರು.
ನಕಲಿ ದಾಖಲೆ ಬಳಸಿ ಆಕ್ಟಿವೇಟೆಡ್ ಮಾಡಿರುತ್ತಿದ್ದ ಸಿಮ್‌ಕಾರ್ಡ್‌ಗಳನ್ನು ಶಂಕರ್ ನೀಡುತ್ತಿದ್ದ. ಅದೇ ಮೊಬೈಲ್ ಸಂಖ್ಯೆಗಳನ್ನು ಬಳಸಿಕೊಂಡು ಚಾಲಕರ ಹೆಸರಿನಲ್ಲಿ ನೋಂದಣಿ ಮಾಡಿಸಲಾಗುತ್ತಿತ್ತು. ನಂತರ, ಚಾಲಕರು ಕೆಲಸ ಮಾಡದಿದ್ದರೂ ಗ್ರಾಹಕರಿಗೆ ಸೇವೆ ನೀಡುತ್ತಿದ್ದಾರೆಂದು ಹೇಳಿ ಕಂಪನಿಗಳಿಂದ ಕಮಿಷನ್ ರೂಪದ ಪ್ರೋತ್ಸಾಹ ಧನ ಪಡೆದು ವಂಚಿಸಲಾಗುತ್ತಿತ್ತು.
ಚಾಲಕರು/ಸವಾರರನ್ನು ನೋಂದಣಿ ಮಾಡಿಸಿದರೆ ಮನೋಜ್‌ಗೆ ಹೆಚ್ಚಿನ ಕಮಿಷನ್ ಸಿಗುತ್ತಿತ್ತು. ಅದೇ ಕಾರಣಕ್ಕೆ ಮನೋಜ್, ಇತರೆ ಆರೋಪಿಗಳ ಜೊತೆ ಸೇರಿ ನಕಲಿ ಚಾಲಕರು–ಸವಾರರ ಹೆಸರಿನಲ್ಲಿ ನೋಂದಣಿ ಮಾಡಿಸುತ್ತಿದ್ದ. ಇದರಿಂದಲೇ ಆರೋಪಿಗಳು ಲಕ್ಷಾಂತರ ರೂಪಾಯಿ ಸಂಪಾದಿಸುತ್ತಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.