ಹೊಸದಿಲ್ಲಿ: ರಾಜ್ಯ ಸರ್ಕಾರಗಳು ಮತ್ತು ರಕ್ಷಣಾ ಸಚಿವಾಲಯದ ನಡುವೆ ಸಹಿ ಹಾಕಲಾದ ಒಪ್ಪಂದದ ಅನುಸಾರ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕರ್ತವ್ಯ ಪಥದಲ್ಲಿ ನಡೆಯಲಿರುವ ಮುಂದಿನ ಮೂರು ಗಣರಾಜ್ಯೋತ್ಸವ ಆಚರಣೆಗಳ ವೇಳೆ ತಮ್ಮ ಟ್ಯಾಬ್ಲೋ ಪ್ರದರ್ಶನಕ್ಕೆ ಸಮಾನ ಅವಕಾಶ ಪಡೆಯಲಿವೆ ಎಂದು ಉನ್ನತ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಪಕ್ಷ ಆಡಳಿತಗಳ ರಾಜ್ಯಗಳಾದ ಕರ್ನಾಟಕ, ಪಂಜಾಬ್ ಮತ್ತು ದಿಲ್ಲಿಯ ಸರ್ಕಾರಗಳು ತಮ್ಮ ಟ್ಯಾಬ್ಲೋ ತಿರಸ್ಕರಿಸಲ್ಪಟ್ಟಿರುವ ಕುರಿತು ನೀಡಿರುವ ಹೇಳಿಕೆಗಳ ಹಿನ್ನೆಲೆಯಲ್ಲಿ ಹೊಸ ಆಯ್ಕೆ ಪ್ರಕ್ರಿಯೆ ಬಗ್ಗೆ ಸ್ಪಷ್ಟೀಕರಣ ಬಂದಿದೆ.
ಅಧಿಕಾರಿಗಳ ಪ್ರಕಾರ ಗಣರಾಜ್ಯೋತ್ಸವಕ್ಕೆ ಟ್ಯಾಬ್ಲೋ ಪ್ರದರ್ಶನಕ್ಕೆ ಮೂರು ವರ್ಷದ ರೋಲಿಂಗ್ ಪ್ಲಾನ್ ಕಳೆದ ವರ್ಷ ಆರಂಭಿಸಲಾಗಿತ್ತು. ರಕ್ಷಣಾ ಕಾರ್ಯದರ್ಶಿ ಮತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳ ಸಭೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಈ ಬಾರಿಯ ಗಣರಾಜ್ಯೋತ್ಸವಕ್ಕೆ 15 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೊಗಳನ್ನು ತಜ್ಞ ಸಮಿತಿಯ ನಾಲ್ಕು ಸುತ್ತಿನ ಸಭೆ ಬಳಿಕ ನಿರ್ಧರಿಸಲಾಗಿತ್ತು ಎಂದು ಹೇಳಿರುವ ಅಧಿಕಾರಿಗಳು ಆಯ್ಕೆ ಪ್ರಕ್ರಿಯೆ ಪಾರದರ್ಶಕ ಮತ್ತು ಸಮಾಲೋಚನಾತ್ಮಕವಾಗಿತ್ತು ಎಲ್ಲರಿಗೂ ಸಮಾನ ಅವಕಾಶ ಒದಗಿಸುತ್ತದೆ ಎಂದಿದ್ದಾರೆ.
ಈ ಬಾರಿ ಗುಜರಾತ್, ಉತ್ತರ ಪ್ರದೇಶ, ಛತ್ತೀಸಗಢ, ಹರ್ಯಾಣ, ಲಡಾಖ್, ಆಂಧ್ರ ಪ್ರದೇಶ, ಅರುಣಾಚಲ ಪ್ರದೇಶ, ಜಾರ್ಖಂಡ್, ಮಧ್ಯ ಪ್ರದೇಶ, ರಾಜಸ್ಥಾನ, ತಮಿಳುನಾಡು, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಒಡಿಶಾ ಮತ್ತು ತೆಲಂಗಾಣ ರಾಜ್ಯಗಳ ಟ್ಯಾಬ್ಲೋ ಪೆರೇಡಿನಲ್ಲಿ ಭಾಗವಹಿಸಲಿವೆ. ಜಮ್ಮು ಕಾಶ್ಮೀರ, ಕರ್ನಾಟಕ, ಹಿಮಾಚಲ ಪ್ರದೇಶ, ತ್ರಿಪುರಾ, ಗೋವಾ, ಆಸ್ಸಾಂ ಮತ್ತು ಉತ್ತರಾಖಂಡ ರಾಜ್ಯಗಳು ಕಂಪು ಕೋಟೆಯಲ್ಲಿ ಜನವರಿ 23ರಿಂದ 31ರ ತನಕ ನಡೆಯಲಿರುವ ಭಾರತ್ ಪರ್ವ್ನಲ್ಲಿ ಭಾಗವಹಿಸಲಿವೆ ಎಂಬ ಮಾಹಿತಿ ಅಧಿಕಾರಿಗಳಿಂದ ಬಂದಿದೆ.