Home Uncategorized ಗದಗ: ಮನೆ ಕಳೆದುಕೊಂಡು ತಿಂಗಳುಗಳಾದರೂ ಇನ್ನು ಸಿಗದ ಪರಿಹಾರ; ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಜನರು

ಗದಗ: ಮನೆ ಕಳೆದುಕೊಂಡು ತಿಂಗಳುಗಳಾದರೂ ಇನ್ನು ಸಿಗದ ಪರಿಹಾರ; ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ಜನರು

17
0

ಗದಗ: ಜಿಲ್ಲೆಯ ರೋಣ ತಾಲೂಕಿನ ನಾಗರಾಳ ಗ್ರಾಮದಲ್ಲಿ ಎರಡು ತಿಂಗಳ ಹಿಂದೆ ಸುರಿದ ರಕ್ಕಸ ಮಳೆಗೆ ಸಾಕಷ್ಟು ಮನೆಗಳು ಕುಸಿದಿದ್ದು, ಸರ್ಕಾರ ಪರಿಹಾರ ಘೋಷಣೆ ಮಾಡುವ ಮೂಲಕ ಬಡ ಜನರ ನೆಮ್ಮದಿಗೆ ನಿಟ್ಟುಸಿರು ಬಿಡುವಂತೆ ಮಾಡಿತ್ತು. ಆದರೆ ಮಳೆ ನಿಂತು ಎರಡು ತಿಂಗಳು ಕಳೆದರೂ ಬಹುತೇಕ ನಿಜವಾದ ಫಲಾನುಭವಿಗಳಿಗೆ ಪರಿಹಾರ ಬಂದಿಲ್ಲ. ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಕೂಡ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಹೀಗಾಗಿ ಇಲ್ಲಿನ ಜನರು ಇದೇ ಮುರುಕುಲ ಮನೆಯಲ್ಲಿ ಜೀವನ ಮಾಡುತ್ತಿದ್ದಾರೆ.

ಗ್ರಾಮೀಣ ಭಾಗದಲ್ಲಿನ ಮಣ್ಣಿನ ಮನೆಗಳಲ್ಲಿ ವಾಸಿಸುವವರ ಸ್ಥಿತಿಯಂತೂ ಯಾರಿಗೂ ಬೇಡ. ನಿರಂತರ ಸುರಿದ ಭಾರಿ ಮಳೆಗೆ ಹಳ್ಳಿಗಳಲ್ಲಿನ ಮಣ್ಣಿನ ಮನೆಗಳು ಕುಸಿದಿವೆ. ಇದ್ದ ಮನೆಗಳನ್ನು ಕಳೆದುಕೊಂಡು ಜನರು ಕಂಗಾಲಾಗಿದ್ದಾರೆ. ಓರ್ವ 105 ವರ್ಷದ ಅಡವೆವ್ವ ಎಂಬ ಅಜ್ಜಿಯ ಬದುಕು ನೋಡಿದರೆ ಅಯ್ಯೋ ಪಾಪ ಎನಿಸುತ್ತದೆ. ಈ ಅಜ್ಜಿಯ ಮನೆ ಬಹುತೇಕ ಕುಸಿದಿದ್ದು, ಆ ಬಡವರ ಬದುಕು ತೀರ ದುಸ್ಥರವಾಗಿದೆ. ಸತ್ತರೆ ಇಲ್ಲೇ ಸಾಯ್ತೀವಿ. ಬೇರೆ ಕಡೆ ಇರೋಕು ಜಾಗವಿಲ್ಲ. ರಿಪೇರಿ ಮಾಡಬೇಕು ಎಂದರೆ ಸರ್ಕಾರ ಒಂದು ಪೈಸೆ ಕೊಟ್ಟಿಲ್ಲ ಎಂದು ಕಿಡಿಕಾರುತ್ತಿದ್ದಾರೆ.

ನಾಗರಾಳ ಗ್ರಾಮದಲ್ಲಿ ಬಹುತೇಕ ಮಣ್ಣಿನ ಮನೆಗಳೇ ಇವೆ. ಹೀಗಾಗಿ ನಿರಂತರ ಸುರಿದ ಮಳೆಗೆ ಪೂರ್ತಿ, ಭಾಗಶಃ, ಅಲ್ಪಸ್ವಲ್ಪ ಮನೆಗಳು ಕುಸಿದಿವೆ. ಕೆಲವರು ಬಿದ್ದ ಮನೆಗಳಿಗೆ ಪ್ಲಾಸ್ಟಿಕ್ ಹಾಳೆ ಹಾಕಿ ಅದೇ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನು ಗ್ರಾಮಲೆಕ್ಕಾಧಿಕಾರಿಗಳು ಸರ್ವೇ ಮಾಡಿಕೊಂಡು ಹೋಗಿದ್ದಾರಂತೆ, ಆದರೆ ಮನೆ ಬಿದ್ದ ಕುಟುಂಬಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದೇ ಗ್ರಾಮದಲ್ಲಿ ಮನೆ ಬೀಳದ ಕೆಲ ಕುಟುಂಬಗಳಿಗೆ ಪರಿಹಾರ ಹಂಚಿಕೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಇನ್ನು ಪರಿಹಾರ ಹಂಚಿಕೆಯ ಗೋಲ್ಮಾಲ್ ಬಗ್ಗೆ ಜಿಲ್ಲಾಧಿಕಾರಿಗಳು, ರೋಣ ತಹಶೀಲ್ದಾರ್​, ಪಿಡಿಓ ಸೇರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ. ಜಿಲ್ಲಾಡಳಿತದ ಪರಿಹಾರ ಹಂಚಿಕೆ ಪಟ್ಟಿಯಲ್ಲಿ ಮನೆ ಬಿದ್ದ ಕುಟುಂಬದ ಹೆಸರು ನಾಪತ್ತೆಯಾಗಿದೆ. ಮನೆ ಬೀಳದ ಕುಟುಂಬಗಳ ಹೆಸರು ಸೇರ್ಪಡೆಯಾಗಿದ್ದು, ಪಂಚಾಯತ್ ಸಿಬ್ಬಂದಿಗಳು ಗೋಲ್ಮಾಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ:ಕೊರೊನಾದಿಂದ ಪ್ರಾಣ ತೆತ್ತವರು ಐನೂರು ನೌಕರರು, ಪರಿಹಾರ ಸಿಕ್ಕಿದ್ದು 11 ಕುಟ್ಟುಂಬಕ್ಕೆ ಮಾತ್ರ: ಕೊಟ್ಟ ಮಾತು ತಪ್ಪಿದ ಸರ್ಕಾರ

ಬಡವರ ಗೋಳಾಟಕ್ಕೆ ಜಿಲ್ಲಾಡಳಿತವೂ ಮೌನವಾಗಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಬಡವರ ಗೋಳಾಟ ಕೇಳುವವರೇ ಇಲ್ಲದಂತಾಗಿದೆ. ಇನ್ನು ಅಧಿಕಾರಿಗಳೇ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆಯಿಂದ ಶಾಸಕರಿಗೂ ಹೇಳಿಲ್ಲವಂತೆ ಇದೀಗ ನಮ್ಮ ಶಾಸಕರಾದ ಸಚಿವ ಸಿ.ಸಿ ಪಾಟೀಲ್ ಅವರ ಗಮನಕ್ಕೆ ತರುತ್ತೇವೆ ಎಂದು ಮನೆ ಕಳೆದುಕೊಂಡ ಬಡವರು ಹೇಳಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಈ ಬಡಕುಟುಂಬಗಳಿಗೆ ಪರಿಹಾರ ನೀಡುತ್ತದೆಯೇ ಕಾದು ನೋಡಬೇಕಾಗಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here