ಅದು ಹಣ್ಣು ಹಣ್ಣಾದ ದೇಹ. ಆ ದೇಹಕ್ಕೆ ಈಗ ಬರೊಬ್ಬರಿ 105 ವರ್ಷ. ಆದ್ರೆ, ಈ ಜೀವಕ್ಕೆ ಆಸರೆ ಇಲ್ಲದಂತಾಗಿದೆ. ಮುರುಕುಲ ಮನೆಯಲ್ಲೇ ಮಗಳು, ಮೊಮ್ಮಕ್ಕಳ ಜೊತೆ ವಾಸವಾಗಿದ್ದಾಳೆ. ಮನೆ ಬಿದ್ದು ಮೂರು ತಿಂಗಳಾದ್ರೂ ನಯಾ ಪೈಸೆ ಪರಿಹಾರ ಬಂದಿಲ್ಲ. ನಮ್ಮಂಥ ಬಡವರು ಏನ್ಮಾಡಬೇಕು. ಇಲ್ಲೇ ಇರ್ತೀವಿ. ಸತ್ರೇ ಇಲ್ಲೇ ಸಾಯ್ತೀವಿ ಅಂತ ಹಿರಿ ಜೀವ ಹೇಳ್ತಾಯಿದೆ. ಹೌದು ಆ ಗ್ರಾಮದಲ್ಲಿ ಮನೆ ಬಿದ್ದ ಕುಟುಂಬಗಳಿಗೆ (Gadag rains) ಪರಿಹಾರ ನೀಡಿಲ್ಲ. ಮನೆ ಬಿಳದೇ ಇದ್ರೂ ಕೆಲವರಿಗೆ ಪರಿಹಾರ (compensation) ನೀಡಲಾಗಿದೆ. ಡಿಸಿ (compensation dc), ತಹಶೀಲ್ದಾರ ಮನವಿ ಮಾಡಿದ್ರೂ ಬಡವರ ಗೋಳಾಟ ಮಾತ್ರ ಕೇಳೋರಿಲ್ಲದಂತಾಗಿದೆ.
ಪರಿಹಾರಕ್ಕಾಗಿ ಬಡ ಜನ್ರ ಗೋಳಾಟ…! ಮುರುಕುಲ ಮನೆಯಲ್ಲಿ 105 ವರ್ಷ ಅಜ್ಜಿ ಗೋಳಾಟ…! ಡಿಸಿ, ತಹಶೀಲ್ದಾರ್ ಗಮನಕ್ಕೆ ತಂದ್ರೂ ಅವರು ಡೋಂಟ್ ಕೇರ್ ಅಂತಾರೆ ಎಂದು ಗ್ರಾಮಸ್ಥರು ಕಿಡಿ ಕಿಡಿ…! ಮನೆ ಬೀಳದವ್ರಿಗೆ ಪರಿಹಾರ ನೀಡ್ತಾರೆ, ಮಳೆಯಿಂದಾಗಿ ಮನೆ ಬಿದ್ದವ್ರಿಗೆ ಖಾಲಿ ಕೈ ಎಂದು ಬಡ ಜನರು ಆಕ್ರೋಶ ಹಾಕ್ತಾರೆ!
ಎರಡು ತಿಂಗಳ ಹಿಂದೆ ಸುರಿದ ರಕ್ಕಸ ಮಳೆ ಬಡವರ ಬದುಕನ್ನೇ ಬೀದಿಗೆ ತಳ್ಳಿದೆ. ಗ್ರಾಮೀಣ ಭಾಗದಲ್ಲಿನ ಮಣ್ಣಿನ ಮನೆಗಳ ಜನ್ರ ಸ್ಥಿತಿಯಂತೂ ಯಾರಿಗೂ ಬೇಡ. ಹೌದು ನಿರಂತರ ಸುರಿದ ಭಾರಿ ಮಳೆಗೆ ಹಳ್ಳಿಗಳಲ್ಲಿ ಮಣ್ಣಿನ ಮನೆಗಳು ಕುಸಿದಿವೆ. ಇದ್ದೊಂದು ಬಾಳಿ ಬದುಕಿದ ಮನೆಗಳು ಕುಸಿದು ಬಡ ಜನ್ರು ಕಂಗಾಲಾಗಿದ್ದಾರೆ. ಈ ಮಧ್ಯೆ, ಸರ್ಕಾರ ಪರಿಹಾರ ಘೋಷಣೆ ಮಾಡುವ ಮೂಲಕ ಬಡ ಜನ್ರು ನೆಮ್ಮದಿ ನಿಟ್ಟುಸಿರು ಬಿಡುವಂತೆ ಮಾಡಿತ್ತು.
ಆದ್ರೆ, ಮಳೆ ನಿಂತು ಎರಡು ತಿಂಗಳು ಕಳೆದ್ರೂ ಬಹುತೇಕ ನಿಜವಾದ ಫಲಾನುಭವಿಗಳಿಗೆ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಹೌದು ಗದಗ ಜಿಲ್ಲೆಯ ರೋಣ ತಾಲೂಕಿನ ನಾಗರಾಳ ಗ್ರಾಮದಲ್ಲಿ ಸಾಕಷ್ಟು ಮನೆಗಳು ಕುಸಿದಿವೆ. ಅದ್ರಲ್ಲೂ ಓರ್ವ 105 ವರ್ಷದ ಅಜ್ಜಿ ಬದುಕು ನೋಡಿದ್ರೆ ಅಯ್ಯೋ ಪಾಪ ಎನಿಸುತ್ತೆ. ಗ್ರಾಮ ಅಡವೆವ್ವ ಎಂಬ ಅಜ್ಜಿಗೆ ಬೊರೊಬ್ಬರಿ 105 ವರ್ಷ.
ಈ ಅಜ್ಜಿ ಮನೆ ಬಹುತೇಕ ಕುಸಿದಿದೆ. ಆದ್ರೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಇಲ್ಲಿವರೆಗೂ ಒಂದು ರೂಪಾಯಿ ಪರಿಹಾರ ಬಂದಿಲ್ಲ. ಹೀಗಾಗಿ ಈ ಹಿರಿ ಜೀವವು ಮಗಳು ಹಾಗೂ ಮೊಮ್ಮಕ್ಕಳೊಂದಿಗೆ ಇದೇ ಮುರುಕುಲ ಮನೆಯಲ್ಲಿ ಜೀವನ ಮಾಡ್ತಾಯಿದ್ದಾರೆ. ಬಡವರ ಬದುಕು ತೀರ ದುಃಸ್ಥರವಾಗಿದೆ. ಸತ್ರೇ ಇಲ್ಲೇ ಸಾಯ್ತೀವಿ. ಬೇರೆ ಕಡೆ ಇರೋಕೆ ಜಾಗವಿಲ್ಲ. ರಿಪೇರಿ ಮಾಡಬೇಕು ಅಂದ್ರೆ ಸರ್ಕಾರ ಒಂದು ಪೈಸೆ ಕೊಟ್ಟಿಲ್ಲ ಅಂತ ಕಿಡಿಕಾರಿದ್ದಾರೆ.
Also Read: ಕರ್ನಾಟಕ ರಾಜ್ಯದಲ್ಲಿ 5, 8ನೇ ತರಗತಿಗೂ ವಾರ್ಷಿಕ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ
ನಾಗರಾಳ ಗ್ರಾಮದಲ್ಲಿ ಬಹುತೇಕ ಮಣ್ಣಿನ ಮನೆಗಳೇ ಇವೆ. ಹೀಗಾಗಿ ನಿರಂತರ ಸುರಿದ ಮಳೆಗೆ ಪೂರ್ತಿ, ಭಾಗಶಃ, ಅಲ್ಪಸ್ವಲ್ಪ ಮನೆಗಳು ಕುಸಿದಿವೆ. ಕೆಲವ ಬಿದ್ದ ಮನೆಗಳಿಗೆ ಪ್ಲಾಸ್ಟಿಕ್ ಹಾಳೆ ಹಾಕಿ ಅದೇ ಮನೆಯಲ್ಲಿ ವಾಸವಾಗಿದ್ದಾರೆ. ಇನ್ನೂ ಗ್ರಾಮ ಪಂಚಾಯತ್, ಗ್ರಾಮ ಲೆಕ್ಕಾಧಿಕಾರಿಗಳು ಸರ್ವೇ ಮಾಡಿಕೊಂಡು ಹೋಗಿದ್ದಾರೆ. ಆದ್ರೆ, ಮನೆ ಬಿದ್ದ ಕುಟುಂಬಗಳಿಗೆ ಪರಿಹಾರ ಮಾತ್ರ ಸಿಕ್ಕಿಲ್ಲ.
ಇದೇ ಗ್ರಾಮದಲ್ಲಿ ಮನೆ ಬೀಳದ ಕೆಲ ಕುಟುಂಬಗಳಿಗೆ ಪರಿಹಾರ ಹಂಚಿಕೆ ಮಾಡಿದ್ದಾರೆ ಅಂತ ಗ್ರಾಮಸ್ಥರು ಆರೋಪಿಸಿದ್ದಾರೆ. ಪರಿಹಾರ ಹಂಚಿಕೆ ಗಾಗಿ ಜಿಲ್ಲಾಧಿಕಾರಿಗಳು, ರೋಣ ತಹಶೀಲ್ದಾರ್, ಪಿಡಿಓ ಸೇರಿ ಸಂಬಂಧಿಸಿದ ಅಧಿಕಾರಿಗಳು ಮನವಿ ಮಾಡಿದ್ರೂ ಕ್ಯಾರೇ ಎಂದಿಲ್ಲ. ಜಿಲ್ಲಾಡಳಿತದ ಪರಿಹಾರ ಹಂಚಿಕೆ ಪಟ್ಟಿಯಲ್ಲಿ ಮನೆ ಬಿದ್ದ ಕುಟುಂಬದ ಹೆಸರು ನಾಪತ್ತೆಯಾಗಿ, ಮನೆ ಬಿಳದ ಕುಟುಂಬಗಳ ಹೆಸರು ಸೇರ್ಪಡೆಯಾಗಿವೆ. ಪಂಚಾಯತ್ ಸಿಬ್ಬಂದಿ ಗೋಲ್ಮಾಲ್ ಮಾಡಿದ್ದಾರೆ ಅಂತ ಗ್ರಾಮಸ್ಥ ಮಹಾರುದ್ರಗೌಡ ಆರೋಪಿಸಿದ್ದಾರೆ.
ಬಡವರ ಗೋಳಾಟಕ್ಕೆ ಜಿಲ್ಲಾಡಳಿತವೂ ಮೌನವಾಗಿದೆ. ಹೀಗಾಗಿ ಗದಗ ಜಿಲ್ಲೆಯಲ್ಲಿ ಬಡವರ ಗೋಳಾಟ ಕೇಳೋರೇ ಇಲ್ಲದಂತಾಗಿದೆ. ಅಧಿಕಾರಿಗಳೇ ನ್ಯಾಯ ಕೊಡಿಸ್ತಾರೆ ಅಂದ್ಕೊಂಡು ನಮ್ಮ ಶಾಸಕರೂ ಆದ ಸಚಿವ ಸಿ ಸಿ ಪಾಟೀಲರಿಗೆ ಹೇಳಿಲ್ಲ. ಈಗ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ನಮ್ಮ ಶಾಸಕರೂ ಆದ ಸಚಿವ ಸಿ ಸಿ ಪಾಟೀಲ್ ಗಮನಕ್ಕೆ ತರುತ್ತೇವೆ ಅಂತ ಮೆನೆ ಕಳೆದುಕೊಂಡ ಬಡವರು ಹೇಳಿದ್ದಾರೆ. ಇನ್ನಾದ್ರೂ ಜಿಲ್ಲಾಡಳಿತ ಈ ಬಡಕುಟುಂಬಗಳಿಗೆ ಪರಿಹಾರ ನೀಡುತ್ತಾ ಕಾದು ನೋಡಬೇಕಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ