ಅಯೋಧ್ಯೆ (ಉತ್ತರ ಪ್ರದೇಶ): ತಮ್ಮ ಗನ್ ಅನ್ನು ಸ್ವಚ್ಛಗೊಳಿಸುವಾಗ, ಅದು ಆಕಸ್ಮಿಕವಾಗಿ ಸಿಡಿದಿದ್ದರಿಂದ ಪ್ರಾಂತೀಯ ಸಶಸ್ತ್ರ ಪೊಲೀಸ್ ಪಡೆ(ಪಿಎಸಿ)ಯ ಕಮಾಂಡೊ ಒಬ್ಬರು ಗಾಯಗೊಂಡಿರುವ ಘಟನೆ ರಾಮಮಂದಿರ ಸಂಕೀರ್ಣದಲ್ಲಿ ಮಂಗಳವಾರ ಸಂಜೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಾಳುವನ್ನು ಪ್ಲಟೂನ್ ಕಮಾಂಡರ್ ರಾಮ್ ಪ್ರಸಾದ್ ಎಂದು ಗುರುತಿಸಲಾಗಿದ್ದು, ಅವರನ್ನು ತಕ್ಷಣವೇ ಅಯೋಧ್ಯೆ ವೈದ್ಯಕೀಯ ಕಾಲೇಜಿಗೆ ರವಾನಿಸಲಾಯಿತು. ನಂತರ ಅವರನ್ನು ಲಕ್ನೊದ ಕೆಜಿಎಂಯು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ರಾಮ್ ಪ್ರಸಾದ್ ಅವರನ್ನು ಕಳೆದ ಆರು ತಿಂಗಳಿನಿಂದ ಭದ್ರತಾ ಕರ್ತವ್ಯದ ಮೇಲೆ ರಾಮ ಜನ್ಮಭೂಮಿ ಸಂಕೀರ್ಣದಲ್ಲಿ ನಿಯೋಜಿಸಲಾಗಿತ್ತು ಎಂದು ಹೇಳಲಾಗಿದೆ.
ರಾಮ್ ಪ್ರಸಾದ್ ಅವರು ತಮ್ಮ ಆಯುಧವನ್ನು ಸ್ವಚ್ಛಗೊಳಿಸುವಾಗ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮಹಾ ನಿರೀಕ್ಷಕ ಪ್ರವೀಣ್ ಕುಮಾರ್ ತಿಳಿಸಿದ್ದಾರೆ.
ಗನ್ ನಿಂದ ಹಾರಿರುವ ಗುಂಡು ರಾಮ್ ಪ್ರಸಾದ್ ಅವರ ಎದೆಯ ಎಡ ಭಾಗಕ್ಕೆ ತಗುಲಿದೆ ಎಂದು ಅಯೋಧ್ಯೆಯಲ್ಲಿನ ವೈದ್ಯಕೀಯ ಕಾಲೇಜಿನ ತುರ್ತು ಘಟಕದ ಉಸ್ತುವಾರಿ ವೈದ್ಯ ಡಾ. ವಿನೋದ್ ಕುಮಾರ್ ಆರ್ಯ ಹೇಳಿದ್ದಾರೆ.
ರಾಮ್ ಪ್ರಸಾದ್ ಅವರ ಪರಿಸ್ಥಿತಿಯು ಗಂಭೀರವಾಗಿದ್ದುದರಿಂದ, ಅವರನ್ನು ಲಕ್ನೊದಲ್ಲಿನ ಕೆಜಿಎಂಯು ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.
ರಾಮ್ ಪ್ರಸಾದ್ ಅಮೇಥಿ ಜಿಲ್ಲೆಯ ಅಚಲ್ ಪುರ್ ಗ್ರಾಮದ ನಿವಾಸಿಯಾಗಿದ್ದಾರೆ.