ಗಾಂಧಿ ಜಯಂತಿ ನಿಮಿತ್ತ ಬೆಂಗಳೂರಿನಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪಾಲಿಕೆ ಶನಿವಾರ ಆದೇಶ ಹೊರಡಿಸಿದೆ. ಬೆಂಗಳೂರು: ಗಾಂಧಿ ಜಯಂತಿ ನಿಮಿತ್ತ ಬೆಂಗಳೂರಿನಲ್ಲಿ ಪ್ರಾಣಿ ಹತ್ಯೆ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಿ ಬೆಂಗಳೂರು ನಗರ ಪಾಲಿಕೆ ಶನಿವಾರ ಆದೇಶ ಹೊರಡಿಸಿದೆ.
ಬಿಬಿಎಂಪಿಯ ಪ್ರಾಣಿ ಸಲಹಾ ವಿಭಾಗವು ಈ ಕುರಿತು ಆದೇಶ ಹೊರಡಿಸಿದೆ. ‘ದಿನಾಂಕ 02-10-2023 ಸೋಮವಾರ ಗಾಂಧಿ ಜಯಂತಿ ಪ್ರಯುಕ್ತ ಬೆಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಹಾಗೂ ಮಳಿಗೆಗಳಲ್ಲಿ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ’ ಎಂದು ತಿಳಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಾಂಸ ಉದ್ದಿಮೆ ನಡೆಸುತ್ತಿರುವ ಉದ್ದಿಮೆದಾರರಿಗೆ ಮಾಂಸ ಮಾರಾಟ ಮಾಡದಂತೆ ಇಲಾಖೆ ಸೂಚನೆ ನೀಡಿದ್ದು, ತಪ್ಪಿದಲ್ಲಿ ಪಾಲಿಕೆ ಕಾಯ್ದೆ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಇನ್ನು ಮತ್ತೊಂದೆಡೆ ಸೋಮವಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಮಾಂಸ ಮಾರಾಟ ಇರಲ್ಲ ಎಂದು ಪಾಲಿಕೆ ಪಶುಸಂಗೋಪನಾ ಇಲಾಖೆ ಜಂಟಿ-ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಪ್ರಮುಖ ಪಾತ್ರವಹಿಸಿರುವ ಸ್ವಾತಂತ್ರ್ಯ ಹೋರಾಟದ ಪ್ರಮುಖ ನಾಯಕರಲ್ಲಿ ಒಬ್ಬರಾದ ಮೋಹನ್‌ದಾಸ್ ಕರಮಚಂದ್ ಗಾಂಧಿ ಜೀ ಅವರ ಜನ್ಮದಿನವನ್ನು ಪ್ರತಿ ವರ್ಷ ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ.
ಮಹಾತ್ಮ ಗಾಂಧಿ ಜೀ ಅವರು ಅಕ್ಟೋಬರ್ 2, 1869 ರಂದು ಗುಜರಾತ್‌ನ ಪೋರಬಂದರ್‌ನಲ್ಲಿ ಜನಿಸಿದರು. ಇವರು ರಾಷ್ಟ್ರಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು, ಗಾಂಧಿ ಜಯಂತಿಯನ್ನು ಪ್ರತಿ ವರ್ಷ ಭಾರತದಲ್ಲಿ ರಾಷ್ಟ್ರೀಯ ರಜಾದಿನವಾಗಿ ಆಚರಿಸಲಾಗುತ್ತದೆ. ಈ ದಿನದಂದು ಮಾಂಸ ಮಾರಾಟ ನಿಷೇಧಿಸಲಾಗುತ್ತದೆ.