ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿರುವ ಅಂಗಡಿಗಳ ಮಾಲೀಕರಿಗೆ ನಿವೇಶನ ತೆರವು ಮಾಡುವಂತೆ ಬಿಬಿಎಂಪಿ ನೋಟಿಸ್ ನೀಡಿದ್ದು, ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಪಾಲಿಕೆಗೆ ನಿರ್ದೇಶನ ನೀಡಿದೆ. ಬೆಂಗಳೂರು: ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿರುವ ಅಂಗಡಿಗಳ ಮಾಲೀಕರಿಗೆ ನಿವೇಶನ ತೆರವು ಮಾಡುವಂತೆ ಬಿಬಿಎಂಪಿ ನೋಟಿಸ್ ನೀಡಿದ್ದು, ಈ ಸಂಬಂಧ ತ್ವರಿತ ಕ್ರಮ ಕೈಗೊಳ್ಳದಂತೆ ಕರ್ನಾಟಕ ಹೈಕೋರ್ಟ್ ಪಾಲಿಕೆಗೆ ನಿರ್ದೇಶನ ನೀಡಿದೆ.
ಬಿಬಿಎಂಪಿ ಒಡೆತನದ ಗಾಂಧಿ ಬಜಾರ್ ಮಾರುಕಟ್ಟೆಯಲ್ಲಿ ಅಂಗಡಿಗಳನ್ನು ನಡೆಸುತ್ತಿರುವ ಕೆ.ಆರ್.ವಿನಾಯಕ ಸೇರಿ ಎಂಟು ಮಂದಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಈ ಆದೇಶ ನೀಡಿದ್ದಾರೆ.
ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ ಶಾಪಿಂಗ್ ಕಾಂಪ್ಲೆಕ್ಸ್ ಅನ್ನು ಕೆಡವಲು ಮತ್ತು ಮರುನಿರ್ಮಾಣ ಮಾಡಲು ಬಯಸುವುದಾಗಿ ಹೇಳಿ ಏಳು ದಿನಗಳೊಳಗೆ ತಮ್ಮ ನಿವೇಶನಗಳನ್ನು ಖಾಲಿ ಮಾಡುವಂತೆ ಅರ್ಜಿದಾರರಿಗೆ ಬೆಂಗಳೂರು ಮಹನಾಗರ ಪಾಲಿಕೆಯು ಫೆಬ್ರವರಿ 22, 2023 ರಂದು ನೋಟಿಸ್ ನೀಡಿದೆ.
ಬಿಬಿಎಂಪಿಯು 2022ರ ಆಗಸ್ಟ್ 18ರಂದು ನೋಟಿಸ್ ಜಾರಿ ಮಾಡಿದ್ದು, ಬಾಡಿಗೆ ಬಾಕಿ ಪಾವತಿಸುವಂತೆ ಹಾಗೂ 15 ದಿನಗಳೊಳಗೆ ನಿವೇಶನ ಖಾಲಿ ಮಾಡುವಂತೆ ಸೂಚಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅರ್ಜಿದಾರರಲ್ಲಿ ಕೆಲವರು ಬೇಡಿಕೆಯ ಮೊತ್ತವನ್ನು ಪಾವತಿಸಿದ್ದಾರೆ, ಮತ್ತು ಇನ್ನೂ ಕೆಲವರು ಹಣ ಸಂದಾಯ ಮಾಡಲು ಮುಂದಾಗಿದ್ದಾರೆ.
ಪರ್ಯಾಯ ಸ್ಥಳದಲ್ಲಿ ವ್ಯಾಪಾರ ನಡೆಸಲು ತಾತ್ಕಾಲಿಕ ಸೂರು ಕಲ್ಪಿಸಿ, ಹೊಸದಾಗಿ ನಿರ್ಮಿಸಿದ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಮಳಿಗೆಗಳನ್ನು ನೀಡಲಾಗುವುದು ಎಂಬ ಭರವಸೆ ನೀಡುವಂತೆ ಬಿಬಿಎಂಪಿಗೆ ಎಲ್ಲರೂ ಮನವಿ ಮಾಡಿದ್ದಾರೆ.
ಆದರೆ, ಬಿಬಿಎಂಪಿ ಅಧಿಕಾರಿಗಳು ಅರ್ಜಿದಾರರಿಗೆ ಮೌಖಿಕವಾಗಿ ಭರವಸೆ ನೀಡಿದ್ದಾರೆಯೇ ಹೊರತು ಲಿಖಿತವಾಗಿ ಯಾವುದೇ ಭರವಸೆ ನೀಡಲು ಸಿದ್ಧರಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡವನ್ನು ಕೆಡವಿ ಹೊಸ ಕಟ್ಟಡವನ್ನು ಮರುನಿರ್ಮಾಣ ಮಾಡಲು ತಮ್ಮ ಅಭ್ಯಂತರವಿಲ್ಲ ಎಂದು ಅರ್ಜಿದಾರರು ತಿಳಿಸಿದ್ದಾರೆ.
ಅರ್ಜಿದಾರರ ಗಳಿಕೆಯು ಅತ್ಯಲ್ಪವಾಗಿರುವುದರಿಂದ, ತಮ್ಮ ವ್ಯಾಪಾರವನ್ನು ನಿಲ್ಲಿಸಲು ಸಾಧ್ಯವಿಲ್ಲ, ಅವರು ತಮ್ಮ ವ್ಯವಹಾರಗಳನ್ನು ಮುಂದುವರಿಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಬಿಬಿಎಂಪಿಗೆ ವಿನಂತಿಸಿದ್ದಾರೆ.
ಆದರೆ, ಬಿಬಿಎಂಪಿ ತಮ್ಮ ಮನವಿಯನ್ನು ಪರಿಗಣಿಸದೆ ನೆಲಸಮ ಮಾಡಲು ಮುಂದಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಬಿಬಿಎಂಪಿಗೆ ನೋಟಿಸ್ ಜಾರಿ ಮಾಡಿದ ನ್ಯಾಯಾಲಯ ವಿಚಾರಣೆಯನ್ನು 2023ರ ಮಾರ್ಚ್ 17ಕ್ಕೆ ಮುಂದೂಡಿತು.