Home Uncategorized ಗಿರಿಜನರ ಕಲೆಯನ್ನು ಪ್ರೋತ್ಸಾಹಿಸಿ: ಶಾಸಕ ಗುರ್ಮೆ

ಗಿರಿಜನರ ಕಲೆಯನ್ನು ಪ್ರೋತ್ಸಾಹಿಸಿ: ಶಾಸಕ ಗುರ್ಮೆ

13
0

ಉಡುಪಿ: ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶದಲ್ಲಿ ವಿವಿಧ, ಧರ್ಮ, ಭಾಷೆ, ಸಂಸ್ಕೃತಿಗಳು ಸಮ್ಮಿಳಿತವಾ ಗಿದ್ದು, ಸಮಾಜದಲ್ಲಿ ಗಿರಿಜನರ ಕಲೆಯನ್ನು ಮುನ್ನೆಲೆಗೆ ತಂದು ಪ್ರೋತ್ಸಾಹಿಸಬೇಕು ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದ್ದಾರೆ.

ಪೆರ್ಡೂರು ಸುಬ್ರಾಯ ಕಲ್ಯಾಣ ಮಂಟಪದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಮರಾಟಿ ಯುವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಸಂಘ ಪೆರ್ಡೂರು ಇದರ ಸಹಯೋಗದೊಂದಿಗೆ ನಡೆದ ಗಿರಿಜನ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವೈವಿಧ್ಯಮಯ ಕಲಾಪ್ರಕಾರಗಳನ್ನು ಗುರುತಿಸುವುದರ ಮೂಲಕ ಗಿರಿಜನರ ಪ್ರತಿಭೆಯನ್ನು ಸಮಾಜದ ಮುಖ್ಯವಾಹಿನಿಗೆ ತಂದು ಕಲಾವಿದರನ್ನು ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢರನ್ನಾಗಿಸಬೇಕು ಎಂದರು.

ಪೆರ್ಡೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಚೇತನಾ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ 2023ರ ಕರ್ನಾಟಕ ಜಿಲ್ಲಾ ರಾಜ್ಯೋತ್ಸವ ಸನ್ಮಾನ ಸ್ವೀಕರಿಸಿದ ಯಕ್ಷಗಾನ ಕಲಾವಿದ ಮಹಾಬಲ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಾವಿದರಿಂದ ಸುಗಮ ಸಂಗೀತ, ಪಟ ಕುಣಿತ, ಡೋಲು ಮತ್ತು ಕೊಳಲು ವಾದನ, ಕೊರಗರ ಮಹಿಳಾ ಸಾಂಸ್ಕೃತಿಕ ವೈಭವ, ಚಿಲಿಪಿಲಿ ಗೊಂಬೆ, ಪುಣ್ಯಕೋಟಿ ನೃತ್ಯ ರೂಪಕ, ಹೋಳಿ ಕುಣಿತ, ಕುಣಿತ ಭಜನೆ, ಯಕ್ಷಗಾನ ವೈಭವ, ಕರಗ ಕೋಲಾಟ, ಚಂಡೆವಾದನ, ಬೇಡರ ಕುಣಿತ ಮೊದಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಕೊರಗ ಸಂಘದ ಜಿಲ್ಲಾ ಅಧ್ಯಕ್ಷೆ ಗೌರಿ, ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಮತ್ತು ಮರಾಟಿ ಯುವ ಸಾಂಸ್ಕೃತಿಕ ಕಲಾ ಮತ್ತು ಕ್ರೀಡಾ ಸಂಘದ ಅಧ್ಯಕ್ಷ ರವಿ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ ವಾಣಿ ಪೆರ್ಡೂರು ಕಾರ್ಯಕ್ರಮ ನಿರೂಪಿಸಿ, ಪ್ರತೀಕ್ಷಾ ವಂದಿಸಿದರು.

LEAVE A REPLY

Please enter your comment!
Please enter your name here