ಹೊಸದಿಲ್ಲಿ: ಗುಜರಾತ್‌ನ ಮೊರ್ಬಿ ಜಿಲ್ಲೆಯ ಝುಲ್ಟು ಪುಲ್ ಎಂಬಲ್ಲಿ ನಿರ್ಮಾಣವಾಗುತ್ತಿರುವ ಸ್ವಾಮಿನಾರಾಯಣ ದೇವಸ್ಥಾನವು ಹತ್ತಿರದಲ್ಲಿ ಹರಿಯುವ ಮಚ್ಚು ನದಿ ದಂಡೆ ಪ್ರದೇಶದ ಜಮೀನನ್ನು ಒತ್ತುವರಿ ಮಾಡಿದೆ ಏಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಜಿಲ್ಲಾ ಕಲೆಕ್ಟರ್ ಕೆ.ಬಿ. ಝವೇರಿ ತಿಳಿಸಿದ್ದು, ಒತ್ತುವರಿಯನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಕಳೆದ ವರ್ಷ ತೂಗುಸೇತುವೆ ಕುಸಿತ ದುರ್ಘಟನೆ ಸಂಭವಿಸಿದ ಸ್ಥಳದ ಸಮೀಪ ದೇವಳದ ನಿರ್ಮಾಣವು ನದಿಯ ಹರಿವಿಗೆ ಅಡ್ಡಿಯುಂಟು ಮಾಡುತ್ತಿದೆ ಹಾಗೂ ನೆರೆಯುಂಟಾದಲ್ಲಿ ಅನಾಹುತ ಸೃಷ್ಟಿಯಾಗಬಹುದು ಎಂದು ಹೇಳಿ ಮೊರ್ಬಿ ಸ್ಥಳೀಯಾಡಳಿತ ಕೆಲ ದಿನಗಳ ಹಿಂದೆಯಷ್ಟೇ ಒತ್ತುವರಿ ನೆಲಸಮ ಕುರಿತಂತೆ ನೋಟಿಸ್ ಜಾರಿಗೊಳಿಸಿತ್ತು.
ಒತ್ತುವರಿ ಆರೋಪಗಳ ಕುರಿತಂತೆ ಜಂಟಿ ತನಿಖೆ ನಡೆಸಿದ ವಿವಿಧ ಇಲಾಖೆಗಳ ತಂಡ ವರದಿ ಸಲ್ಲಿಸಿದೆ ಎಂದು ಕಲೆಕ್ಟರ್ ತಿಳಿಸಿದ್ದಾರೆ.
ದೇವಸ್ಥಾನವನ್ನು ಬೋಚಸನ್ವಾಸಿ ಶ್ರೀ ಅಕ್ಷರ ಪುರುಷೋತ್ತಮ ಸ್ವಾಮಿನಾರಾಯಣ ಸಂಸ್ಥಾ ನಿರ್ಮಿಸುತ್ತಿದೆ. ಇದು ಸ್ವಾಮಿನಾರಾಯಣ ಪಂಥದ ಉಪ ಪಂಥವಾಗಿದೆ.
ಜಲಮೂಲಗಳ ದಂಡೆ ಪ್ರದೇಶದಲ್ಲಿ ನಿರ್ಮಾಣ ಕುರಿತಂತೆ ಇರುವ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ವರದಿ ತಿಳಿಸಿದೆ ಎಂದು ಜಿಲ್ಲಾ ಕಲೆಕ್ಟರ್ ಹೇಳಿದ್ದಾರೆ.