ಗುರುಗ್ರಾಮ: ಗುರುಗ್ರಾಮದ ಸೆಕ್ಟರ್ 37 ರಲ್ಲಿ ನೆರೆಮನೆಯ ಕಾಮುಕನೊಬ್ಬ ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಯ ಸಮಯದಲ್ಲಿ ಹೀನ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಅವರು ಹೇಳಿದ್ದಾರೆ.
ಗುರುವಾರ ರಾತ್ರಿ, ಮೊಹಮ್ಮದ್ಪುರ್ ಝಾರ್ಸಾ ಗ್ರಾಮದಲ್ಲಿ ಮೂರು ವರ್ಷದ ಬಾಲಕಿಯೊಬ್ಬಳು ಕಾಣೆಯಾಗಿದ್ದಾಳೆ ಎಂದು ಪೊಲೀಸರಿಗೆ ದೂರು ಬಂದಿದ್ದು, ನೆರೆಹೊರೆಯಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬ ಆಕೆಗೆ ಆಮಿಷವೊಡ್ಡಿ ಅಪಹರಿಸಿದ್ದಾನೆ ಎಂದು ಕುಟುಂಬ ಆರೋಪಿಸಿದೆ.
ಈ ಸಂಬಂಧ ಸೆಕ್ಟರ್ 37 ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ ಒಂದು ಗಂಟೆಯೊಳಗೆ ಪೊಲೀಸರು ಗುರುಗ್ರಾಮ್ನಲ್ಲಿ ಸ್ಕ್ರ್ಯಾಪ್ ಸಂಗ್ರಾಹಕನಾಗಿ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ವಿಚಾರಣೆಯ ಸಮಯದಲ್ಲಿ, ಗುರುವಾರ ತಡರಾತ್ರಿ, ಅಪ್ರಾಪ್ತ ಬಾಲಕಿಯನ್ನು ಸೆಕ್ಟರ್ 37ರ ನಿರ್ಜನ ಸ್ಥಳಕ್ಕೆ ಕರೆದೊಯ್ದು, ಮಗುವಿನ ಮೇಲೆ ಅತ್ಯಾಚಾರ ಮಾಡಿ, ನಂತರ ಸಾಕ್ಷ್ಯಗಳನ್ನು ನಾಶಮಾಡಲು ಕತ್ತು ಹಿಸುಕಿ ಕೊಂದಿದ್ದಾನೆ. ಈ ಕುರಿತು ಹೆಚ್ಚಿನ ವಿಚಾರಣೆ ನಡೆಯುತ್ತಿದೆ” ಎಂದು ಗುರುಗ್ರಾಮ್ ಪೊಲೀಸರ ವಕ್ತಾರರು ತಿಳಿಸಿದ್ದಾರೆ.
