ವಿದ್ಯುತ್ ದರ ಏರಿಕೆ ಹಾಗೂ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ ಕುರಿತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯದ ಹಲವೆಡೆ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು. ಬೆಂಗಳೂರು: ವಿದ್ಯುತ್ ದರ ಏರಿಕೆ ಹಾಗೂ ಕರ್ನಾಟಕ ಗೋಹತ್ಯೆ ತಡೆ ಕಾಯ್ದೆ ಕುರಿತು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಅವರ ಹೇಳಿಕೆಯನ್ನು ವಿರೋಧಿಸಿ ರಾಜ್ಯದ ಹಲವೆಡೆ ಬಿಜೆಪಿ ಸೋಮವಾರ ಪ್ರತಿಭಟನೆ ನಡೆಸಿತು.
ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಎರಡೇ ದಿನಗಳಲ್ಲಿ ವಿದ್ಯುತ್ ದರ ಏರಿಕೆ ಮಾಡಲಾಗಿದ್ದು, ಈ ಕ್ರಮವನ್ನು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಭರವಸೆ ನೀಡಿದ್ದ ಉಚಿತ ವಿದ್ಯುತ್ ಲಾಭ ಪಡೆಯಲು ಹಲವು ಷರತ್ತುಗಳನ್ನು ವಿಧಿಸಿರುವ ಸರ್ಕಾರದ ನಿರ್ಧಾರವನ್ನು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಗೋಹತ್ಯೆ ಕಾಯ್ದೆಯನ್ನು ಹಿಂಪಡೆಯಲು ಸರಕಾರ ಮುಂದಾದರೆ ದೊಡ್ಡ ಮಟ್ಟದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಕಾಯಿದೆಯಲ್ಲಿ ಏನಾದರೂ ಬದಲಾವಣೆ ತರಲು ಮುಂದಾಗಿದ್ದೇ ಆದರೆ, ಅದರ ಪರಿಣಾಮವನ್ನು ಕಾಂಗ್ರೆಸ್ ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಎಚ್ಚರಿಸಿದ್ದಾರೆ.
ಈ ಕಾಯಿದೆಯು 1960 ರ ದಶಕದಿಂದಲೂ ಇತ್ತು. ಬಿಜೆಪಿ ಸರ್ಕಾರವು ಅದನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಶಿಕ್ಷೆಯನ್ನು ವಿಧಿಸಲು ಬದಲಾವಣೆಗಳನ್ನು ಮಾಡಿದೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುವ ಮೂಲಕ ಸರ್ಕಾರ ನಮ್ಮನ್ನು ಗುರಿಯಾಗಿಸುತ್ತಿದೆ ಎಂದು ಇದೇ ವೇಳೆ ಪಕ್ಷದ ಇತರೆ ಮುಖಂಡರು ಆರೋಪಿಸಿದರು.
ರಾಜ್ಯದ ವಿವಿಧೆಡೆ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾಜಿ ಸಚಿವರು, ಶಾಸಕರು, ಮುಖಂಡರು ಪಾಲ್ಗೊಂಡಿದ್ದರೆ, ಮಂಗಳವಾರ ಬೆಳಗ್ಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಬಿಜೆಪಿ ಶಾಸಕರು, ಸಂಸದರು, ಬೆಂಗಳೂರು ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಲಿದ್ದಾರೆ.