ಬೆಂಗಳೂರು;- ರಾಜ್ಯ ಕಾಂಗ್ರೆಸ್ ಸರ್ಕಾರದ ಆಯುಸ್ಸು ಬಹಳ ಕಡಿಮೆ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಕಾಂಗ್ರೆಸ್‍ನವರು ಗ್ಯಾರಂಟಿ ಜಾರಿ ಮಾಡಲಾಗದೆ ಪರಿತಪಿಸುತ್ತಿದ್ದಾರೆ. ಅವರ ತಪ್ಪುಗಳನ್ನು ಸದಾ ಎಳೆಎಳೆಯಾಗಿ ಜನರ ಮುಂದಿಡುತ್ತೇವೆ. ಕಾಂಗ್ರೆಸ್ ಸರ್ಕಾರವನ್ನು ತೆಗೆಯುವವರೆಗೂ ನಮ್ಮ ಹೋರಾಟ ನಡೆಯಲಿದೆ. ಈ ಸರ್ಕಾರವೇ ಬೇಡ ಎಂದು ಕಾಂಗ್ರೆಸ್ಸಿನವರೇ ಹೇಳುತ್ತಿದ್ದಾರೆ. ಇದರ ಅವಧಿ ಇನ್ನೊಂದು ವರ್ಷವಾದರೆ ಹೆಚ್ಚು ಎಂದು ಅಭಿಪ್ರಾಯಪಟ್ಟರು.
ಬರಗಾಲ ಬಂದರೂ ಯಾರೂ ಕೂಡ ಪ್ರವಾಸ ಮಾಡುತ್ತಿಲ್ಲ. ಡಿ ಕೆ ಶಿವಕುಮಾರರು ಬೆಳಗಾವಿಗೆ ಹೋಗಿದ್ದು ಬೇರೆ ಉದ್ದೇಶಕ್ಕೆ, ಅಲ್ಲಿನ ಜಿಲ್ಲಾ ಸಚಿವರೇ ಅವರನ್ನು ಸ್ವಾಗತಿಸಿಲ್ಲ. ಸತೀಶ್ ಜಾರಕಿಹೊಳಿ ಸಂಬಂಧ ಸಮಸ್ಯೆ ಶುರುವಾಗಿದೆ. ಕಾಂಗ್ರೆಸ್ಸಿಗೆ ಒಳಗಿನಿಂದಲೂ ಸಮಸ್ಯೆ, ಹೊರಗಿನಿಂದಲೂ ಸಮಸ್ಯೆ. ಅವರ ತಲೆ ಮೇಲೆ ಅವರೇ ಬಂಡೆ ಹಾಕಿಕೊಂಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಟೀಕಿಸಿದರು.
ಡೈರಿ ನಿಪುಣರು ಯಾರೆಂದು ನಮಗೂ ಗೊತ್ತಿದೆ. ಗುತ್ತಿಗೆದಾರರಿಂದ ವಶಪಡಿಸಿಕೊಂಡದ್ದು ಬಿಜೆಪಿಯವರ ಹಣ ಎಂದು ಡಿಸಿಎಂ ಶಿವಕುಮಾರ್ ಅವರು ಹೇಳಿದ್ದೇ ನಿಜವಾದರೆ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡಲು ಇರುವ ತೊಂದರೆಯಾದರೂ ಏನು ಸವಾಲೆಸೆದರು. ಇದು ಬಿಜೆಪಿಯವರ ಹಣವೆಂದು ಶಿವಕುಮಾರ ಅವರಿಗೆ ಗೊತ್ತಿದ್ದರೆ, ಆ ಸಂಬಂಧ ಡೈರಿ ಇದ್ದರೆ ಅದನ್ನು ಬಿಡುಗಡೆ ಮಾಡಲಿ. ಅದು ನಮ್ಮ ಹಣವಾಗಿದ್ದರೆ ನೀವ್ಯಾಕೆ ಹಿಂದೆ ಬೀಳುತ್ತೀರಿ? ಸಿಬಿಐ ತನಿಖೆ ಮಾಡಿಸಿ. ಸತ್ಯಾಸತ್ಯತೆ ಹೊರಗೆ ಬರಲಿ. ಒಂದು ವೇಳೆ ಸಿಬಿಐ-ಇಡಿ ತನಿಖೆಗೆ ವಹಿಸದಿದ್ದರೆ ಅದು ನಿಮ್ಮ ಹಣ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಹಣವಾದರೆ ತನಿಖೆ ಮಾಡಿಸಿ, ನಿಮ್ಮ ಹಣವಾಗಿದ್ದರೆ ಅದನ್ನು ನೀವು ಒಪ್ಪಿಕೊಂಡರೆ ಸಾಕು ಎಂದರು.
The post ಗ್ಯಾರಂಟಿ ಜಾರಿ ಮಾಡಲಾಗದೆ ಪರಿತಪಿಸುತ್ತಿರುವ ಕಾಂಗ್ರೆಸ್ – ಛಲವಾದಿ ನಾರಾಯಣಸ್ವಾಮಿ appeared first on Ain Live News.