ಶಿವಮೊಗ್ಗ:
ಕೊರೊನಾ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಚುನಾವಣೆ ನಡೆಸಿದರೆ ಸೋಂಕು ಹೆಚ್ಚಾಗಬಹುದು ಎಂಬುದು ಗ್ರಾಮೀಣ ಜನರ ಆತಂಕವಾಗಿದೆ. ಆದ್ದರಿಂದ ಗ್ರಾಮ ಪಂಚಾಯತ್ ಚುನಾವಣೆ ಮುಂದೂಡುವುದು ಒಳಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು, ಕೊರೊನಾ ಹಿನ್ನೆಲೆಯಲ್ಲಿ ಶಾಲೆ ಆರಂಭ ಮಾಡುವುದು ಬೇಡ ಎಂಬುದು ಜನರ ಅಭಿಪ್ರಾಯವಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣೆ ಕೂಡ ಬೇಡ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆದರೂ ಕೂಡ ಭಾರತೀಯ ಜನತಾ ಪಾರ್ಟಿ ಸರ್ಕಾರ ರಾಜ್ಯದಲ್ಲಿ ಗ್ರಾಮ ಪಂಚಾಯತಿಗಳ ಚುನಾವಣೆ ನಡೆಸುವುದಕ್ಕೆ ಸಿದ್ಧವಿದೆ. ಆದರೆ ಕೊರೊನಾ ಇರುವ ಈ ಕೆಟ್ಟ ಸಂದರ್ಭದಲ್ಲಿ ಇಡೀ ಕರ್ನಾಟಕದ ಗ್ರಾಮೀಣ ಪ್ರದೇಶ 6020 ಗ್ರಾಮ ಪಂಚಾಯತ್ ಗಳ ಚುನಾವಣೆ ನಡೆದರೆ ನಿಜಕ್ಕೂ ಕೂಡ ಕೊರೊನಾ ಸಮಸ್ಯೆ ಮತ್ತಷ್ಟು ಉಲ್ಭಣವಾಗಬಹುದು ಎಂಬ ಶಂಕೆ, ಆತಂಕ ಗ್ರಾಮೀಣ ಪ್ರದೇಶದ ಜನರ ಮನಸ್ಸಿನಲ್ಲಿದೆ. ಇದನ್ನು ಪರಿಗಣಿಸಿ ಸರ್ಕಾರ ನ್ಯಾಯಾಲಯಕ್ಕೆ ಮನವರಿಕೆ ಮಾಡಿದೆ. ಈ ಚುನಾವಣೆಗಳನ್ನು ಸ್ವಲ್ಪ ಸಮಯ ಮುಂದೆ ಹಾಕಲು ಚಿಂತನೆ ನಡೆಸಿದೆ. ಆದರೆ ನ್ಯಾಯಾಲಯ ಮತ್ತು ಚುನಾವಣಾ ಆಯೋಗ ಹೇಳುವ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್ ಸೇರಿದಂತೆ ಇತರ ಪಕ್ಷಗಳ ಅಭಿಪ್ರಾಯ ಕೂಡ ಇದೇ ಆಗಿದೆ. ಆದ್ದರಿಂದ ಸ್ವಲ್ಪ ಕಾಲ ಚುನಾವಣೆ ಮುಂದೂಡುವುದು ಒಳ್ಳೆಯದು ಎಂದು ಈಶ್ವರಪ್ಪ ತಿಳಿಸಿದರು.