ಸಾಹಿತ್ಯದಲ್ಲಿ ಅಬ್ಜ, ಇಂದು, ಕುಮುದ ಬಾಂಧವ, ಕ್ಷಪಾಕರ, ನಿಶಾಪತಿ, ಚಂದಿರ, ತಂಗದಿರ, ತುಹಿನಕರ, ದ್ವಿಜರಾಜ, ನಕ್ಷತ್ರೇಶ, ಮೃಗಾಂಕ, ರಜನಿಕರ, ರಜನೀಶ, ವಿಧು, ಹಿಮಾಂಶು, ಸುಧಾಂಶು, ಸೋಮ, ಶಶಿ, ಶುಭ್ರಾಂಶು, ಹೀಗೆ ಅನೇಕ ನಾಮಗಳಿಂದ ಪ್ರಖ್ಯಾತವಾಗಿರುವ ಚಂದ್ರನು, ಕವಿಗಳ ಮನಸ್ಸಿಗೆ ಮಧುರ ಸ್ಪೂರ್ತಿಯಾಗಿದ್ದರೆ, ವಿಜ್ಞಾನಿಗಳ ಕುತೂಹಲಕ್ಕೂ ಅಕ್ಷಯ ಕೇಂದ್ರವಾಗಿದೆ. ಸಾವಿರಾರು ವರ್ಷಗಳಿಂದ ಮಾನವನು ಚಂದ್ರನ ಕಲಾವಳಿಗಳನ್ನು ಗಮನಿಸುತ್ತಿದ್ದರೂ, ಅವುಗಳ ವೈಜ್ಞಾನಿಕ ಅರ್ಥವನ್ನು ಕಳೆದ ಕೆಲವೇ ದಶಕಗಳಲ್ಲಿ ಆಳವಾಗಿ ಗ್ರಹಿಸಲು ಸಾಧ್ಯವಾಗಿದೆ.
ಕಳೆದ ಐದು–ಆರು ದಶಕಗಳಲ್ಲಿ ಕ್ಷಿಪಣಿಗಳ ಮೂಲಕ ಗಗನಯಾನಗಳನ್ನು ಕಳುಹಿಸಿ, ಅತಿಸೂಕ್ಷ್ಮ ಸಂವೇದಕಗಳು, ಸ್ಪೆಕ್ಟ್ರೋಮೀಟರ್ಗಳು, ರಾಡಾರ್ ಸಾಧನಗಳು ಮತ್ತು ರೋವರ್ಗಳ ನೆರವಿನಿಂದ ಚಂದ್ರನ ಮೇಲ್ಮೈಯ ರಚನೆ, ಖನಿಜ ಸಂಯೋಜನೆ, ತಾಪಮಾನ ವ್ಯತ್ಯಾಸ, ಗುರುತ್ವ ಕ್ಷೇತ್ರ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಅಧ್ಯಯನ ಮಾಡಲಾಗಿದೆ. ಚಂದ್ರನ ಮೇಲ್ಮೈ ಲೋಹೀಯವೋ? ಅಲೋಹೀಯವೋ? ಉಷ್ಣವಾಹಕವೋ? ಶೀತವಾಹಕವೋ? ಖನಿಜ ಸಂಪತ್ತಿನ ಶೇಷವೋ? ಧೂಳಿನ ಪದರವೋ? ಇಂತಹ ಅನೇಕ ಪ್ರಶ್ನೆಗಳಿಗೆ ಉತ್ತರ ಹುಡುಕುವ ಕಾರ್ಯದಲ್ಲಿ ಅನೇಕ ರಾಷ್ಟ್ರಗಳು ತೊಡಗಿವೆ; ಭಾರತವೂ ಅದರಲ್ಲಿ ಪ್ರಮುಖ ಸ್ಥಾನ ಪಡೆದಿದೆ.
ಭೂಮಿಗೆ ಸಮೀಪವಾದ ಚಂದ್ರನತ್ತ ಮಾನವಕುಲದ ವೈಜ್ಞಾನಿಕ ಕುತೂಹಲವನ್ನು ತಣಿಸಲು ಜಗತ್ತಿನ ಹಲವು ದೇಶಗಳು ನಿರಂತರ ಯಾನಗಳನ್ನು ಕಳುಹಿಸುತ್ತಿವೆ. 1959ರಲ್ಲಿ ಸೋವಿಯತ್ ಯೂನಿಯನ್ನ ಲೂನಾ–2 ಯಾನ ಚಂದ್ರನೊಂದಿಗೆ ಮೊದಲ ಸ್ಪರ್ಶ ಸಾಧಿಸಿತು; 1969ರಲ್ಲಿ ಅಮೆರಿಕಾದ ಅಪೋಲೊ ಕಾರ್ಯಕ್ರಮದಡಿ ಮಾನವರು ಚಂದ್ರನ ಮೇಲೆ ಇಳಿದು ವಿಶ್ವ ಇತಿಹಾಸದಲ್ಲಿ ಮಹತ್ವದ ಅಧ್ಯಾಯವನ್ನು ರಚಿಸಿದರು. ನಂತರ ಯುರೋಪಿನ ಸ್ಮಾರ್ಟ್–1, ಜಪಾನದ ಸೆಲೆನ್ (ಕಾಗುಯಾ) ಹಾಗೂ ಅಮೆರಿಕಾದ ಲ್ಯೂನರ್ ರಿಕಾನೈಸೆನ್ಸ್ ಆರ್ಬಿಟರ್ ಚಂದ್ರನ ಮೇಲ್ಮೈ ಮತ್ತು ವಲಯಗಳ ಕುರಿತು ವಿಸ್ತೃತ ಮಾಹಿತಿಯನ್ನು ಒದಗಿಸಿವೆ. ಚೀನಾದ ಚಾಂಗ್’ಇ ಸರಣಿಯ ಯಾನಗಳು ಚಂದ್ರನ ಹಿಂಭಾಗದಲ್ಲಿ ಲ್ಯಾಂಡಿಂಗ್ ನಡೆಸಿ ರೋವರ್ ಸಂಚಲನ ಮತ್ತು ಮಾದರಿ ಸಂಗ್ರಹಣೆಯ ಮೂಲಕ ಅಧ್ಯಯನವನ್ನು ಮತ್ತಷ್ಟು ಗಾಢಗೊಳಿಸಿವೆ. ಭಾರತದ ಇಸ್ರೋ ಸಂಸ್ಥೆಯ ಚಂದ್ರಯಾನ–1, 2008ರಲ್ಲಿ ಚಂದ್ರನ ಮೇಲ್ಮೈಯಲ್ಲಿ ನೀರಿನ ಅಣುಗಳಿರುವುದಕ್ಕೆ ದೃಢವಾದ ಸಾಕ್ಷ್ಯಗಳನ್ನು ಪತ್ತೆಹಚ್ಚಿ ಅಂತರಿಕ್ಷ ಅನ್ವೇಷಣೆಗೆ ಹೊಸ ದಿಕ್ಕು ನೀಡಿತು. ಚಂದ್ರಯಾನ–2ನ ಆರ್ಬಿಟರ್ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, 2023ರಲ್ಲಿ ಚಂದ್ರಯಾನ–3 ದಕ್ಷಿಣ ಧ್ರುವದ ಸಮೀಪ ಮೃದು ಲ್ಯಾಂಡಿಂಗ್ ಸಾಧಿಸಿ ರೋವರ್ ಮೂಲಕ ಭೌತಿಕ-ರಾಸಾಯನಿಕ ಗುಣಲಕ್ಷಣಗಳ ಕುರಿತು ಮಹತ್ವದ ಮಾಹಿತಿ ಸಂಗ್ರಹಿಸಿದೆ.
ಇತ್ತೀಚೆಗೆ ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ನೇತೃತ್ವದ ಸ್ಪೇಸ್ಎಕ್ಸ್ ಸಂಸ್ಥೆ ಮಂಗಳ ಗ್ರಹಕ್ಕಿಂತ ಮೊದಲು ಚಂದ್ರನಲ್ಲಿ ಮಾನವ ವಸತಿ ನಿರ್ಮಾಣಕ್ಕೆ ಆದ್ಯತೆ ನೀಡುತ್ತಿದೆ ಎಂದು ಘೋಷಿಸಿದೆ. ಮಸ್ಕ್ ಅವರ ಪ್ರಕಾರ, ಮಂಗಳ ಗ್ರಹಕ್ಕೆ ಉಡಾವಣಾ ಅವಕಾಶಗಳು ಎರಡು ವರ್ಷಕ್ಕೊಮ್ಮೆ ಮಾತ್ರ ಸಿಗುತ್ತವೆ, ಚಂದ್ರನು ಸಮೀಪದಲ್ಲಿರುವುದರಿಂದ ಉಡಾವಣೆ ಚಕ್ರಗಳು ವೇಗವಾಗಿ ಮತ್ತು ನಿಯಮಿತವಾಗಿ ಸಾಧ್ಯವಾಗುತ್ತವೆ. ಇದರಿಂದ ತಂತ್ರಜ್ಞಾನ ಪರೀಕ್ಷೆ, ಸಂಶೋಧನೆ ಹಾಗೂ ಹಂತ ಹಂತವಾಗಿ ವಸತಿ ನಿರ್ಮಾಣ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮುಂದುವರಿಸಲು ಅನುಕೂಲವಾಗುತ್ತದೆ. ಹೀಗಾಗಿ ಚಂದ್ರನಲ್ಲಿ ಶಾಶ್ವತ ವಸತಿ ನಿರ್ಮಾಣವು ಭವಿಷ್ಯದ ಅಂತರಿಕ್ಷ ಆರ್ಥಿಕತೆಯ ಪ್ರಮುಖ ಹಂತವಾಗಿದ್ದು, ಮುಂದಿನ ಮಂಗಳ ಅಭಿಯಾನಗಳಿಗೆ ತಂತ್ರಯುಕ್ತ ನೆಲೆಗಟ್ಟಾಗಬಹುದು ಎಂಬ ಆಶಾವಾದ ವ್ಯಕ್ತವಾಗಿದೆ.
ಭೂಮಿಯಾಚೆ ಮಾನವ ವಾಸ: ಪ್ರಶ್ನೆ ಮತ್ತು ಪ್ರಯತ್ನ
ಭೂಮಿಯಾಚೆ ಮಾನವ ವಾಸ ಸಾಧ್ಯವೇ? ಈ ಪ್ರಶ್ನೆ ವಿಜ್ಞಾನಿಗಳನ್ನು ಹಲವು ದಶಕಗಳಿಂದ ಕಾಡುತ್ತಿದೆ. ಭೂಮಿಗೆ ಅತ್ಯಂತ ಸಮೀಪದಲ್ಲಿರುವ ಗಗನಪಿಂಡವಾದ ಚಂದ್ರನು, ಮಾನವ ವಾಸದ ಮೊದಲ ಗುರಿಯಾಗಿ ಪರಿಗಣಿಸಲಾಗುತ್ತಿದೆ. ಕಾರಣ, ಇದು ಭೂಮಿಗೆ ಸಮೀಪವಿರುವ (384,400 kilometers) ಏಕೈಕ ನೈಸರ್ಗಿಕ ಉಪಗ್ರಹ. ಇತ್ತೀಚಿನ ಸಂಶೋಧನೆಗಳು ಚಂದ್ರನ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಹಿಮರೂಪದ ನೀರಿನ ಅಸ್ತಿತ್ವವನ್ನು ದೃಢಪಡಿಸಿವೆ. ಖನಿಜ ಸಂಪತ್ತು, ಸೌರಶಕ್ತಿಯ ಅಪಾರ ಲಭ್ಯತೆ ಮತ್ತು ಬಾಹ್ಯಾಕಾಶ ಸಂಶೋಧನೆಗೆ ಆಧಾರಕೇಂದ್ರವಾಗಿ ಬಳಸುವ ಸಾಧ್ಯತೆಗಳು ಚಂದ್ರನ ಮಹತ್ವವನ್ನು ಹೆಚ್ಚಿಸಿವೆ. ಆದರೆ ಭೌತಿಕ, ರಾಸಾಯನಿಕ ಮತ್ತು ಜೈವಿಕ ನಿಯಮಗಳು ಮಾನವ ವಾಸಕ್ಕೆ ಗಂಭೀರ ಸವಾಲುಗಳನ್ನು ಒಡ್ಡುತ್ತವೆ.
ಭೌತಿಕ ಪರಿಸ್ಥಿತಿಗಳು: ಅತಿ ಕಠಿಣ ವಾಸಸ್ಥಿತಿ
ಚಂದ್ರನ ಮೇಲೆ ಭೂಮಿಯಂತಹ ವಾತಾವರಣವಿಲ್ಲ. ಆದ್ದರಿಂದ ಉಸಿರಾಟಕ್ಕೆ ಅಗತ್ಯವಾದ ಆಮ್ಲಜನಕ ಲಭ್ಯವಿಲ್ಲ; ಜೊತೆಗೆ ಸೂರ್ಯನ ನೇರಳಾತೀತ UV), ಎಕ್ಸ್-ಕಿರಣಗಳು (X-rays) ಮತ್ತು ಬ್ರಹ್ಮಾಂಡೀಯ ಕಿರಣಗಳಿಂದ(Cosmic radiation) ರಕ್ಷಣೆ ನೀಡುವ ಗಾಳಿಪದರಗಳೂ ಇಲ್ಲ. ಹಗಲಿನಲ್ಲಿ ತಾಪಮಾನವು ಸುಮಾರು +127°C ತನಕ ಏರಿದರೆ, ರಾತ್ರಿ –173°C ತನಕ ಇಳಿಯುತ್ತದೆ. ಇಂತಹ ತಾಪಮಾನ ವ್ಯತ್ಯಾಸ ಮಾನವ ವಾಸಕ್ಕೆ ತೀವ್ರ ಸವಾಲು ಒಡ್ಡುತ್ತದೆ. ಚಂದ್ರನ ಗುರುತ್ವಾಕರ್ಷಣವು ಭೂಮಿಗಿಂತ ಸುಮಾರು 1/6 ಭಾಗ ಮಾತ್ರ. ಕಡಿಮೆ ಗುರುತ್ವಕ್ಷೇತ್ರ ಪರಿಸ್ಥಿತಿಯಲ್ಲಿ ದೀರ್ಘಾವಧಿ ವಾಸವು ಮೂಳೆಗಳ ಖನಿಜ ಸಾಂದ್ರತೆಯ ಕುಗ್ಗುವಿಕೆ ಹಾಗೂ ಅಸ್ಥಿ ಡಿಮಿನರಲೈಸೇಶನ್ ಗೆ ಕಾರಣವಾಗುತ್ತದೆ. ಇದರ ಜೊತೆಗೆ, ತೂಕಭರಿಸುವ ಸ್ನಾಯುಗಳಲ್ಲಿ ಸ್ನಾಯು ಕ್ಷಯ ಉಂಟಾಗಿ ಸ್ನಾಯು ಶಕ್ತಿಯ ಹೀನತೆ ಕಾಣಿಸಬಹುದು. ರಕ್ತಸಂಚಾರ ವ್ಯವಸ್ಥೆಯಲ್ಲಿ ದ್ರವ ಮರುಹಂಚಿಕೆ, ಹೃದಯದ ಕಾರ್ಯಭಾರದ ಬದಲಾವಣೆ ಹಾಗೂ ಆರ್ಥೋಸ್ಟಾಟಿಕ್ ಅಸಹಿಷ್ಣುತೆ ಲಕ್ಷಣಗಳು ಕಂಡುಬರುತ್ತವೆ. ಆದ್ದರಿಂದ ದೀರ್ಘಕಾಲೀನ ವಾಸಕ್ಕಾಗಿ ಪ್ರತಿರೋಧಾತ್ಮಕ ವ್ಯಾಯಾಮ ಕ್ರಮಗಳು, ಕೃತಕ ಗುರುತ್ವ ತಂತ್ರಜ್ಞಾನ ಮತ್ತು ನಿಯಮಿತ ವೈದ್ಯಕೀಯ ಮೇಲ್ವಿಚಾರಣೆ ಅಗತ್ಯವಾಗುತ್ತದೆ.
ಕಿರಣ ಮತ್ತು ಧೂಳಿನ ಕಣಗಳು: ಕಾಣದ ಶತ್ರುಗಳು
ವಾತಾವರಣದ ಕೊರತೆಯಿಂದ ಸೂರ್ಯನ ನೇರಳಾತೀತ ಕಿರಣಗಳು, ಸೌರ ಕಣಪ್ರವಾಹಗಳು ಮತ್ತು ಬ್ರಹ್ಮಾಂಡೀಯ ಕಿರಣಗಳು ನೇರವಾಗಿ ಚಂದ್ರನ ಮೇಲ್ಮೈಗೆ ಬೀಳುತ್ತವೆ. ಇವು ಡಿಎನ್ಎ ಹಾನಿ, ಜನ್ಯ ಪರಿವರ್ತನೆ ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ದೀರ್ಘಾವಧಿಯ ವಾಸಕ್ಕೆ ಭೂಗರ್ಭದ ಲಾವಾ ನಾಳಿಕೆಗಳೊಳಗಿನ ವಾಸಸ್ಥಾನಗಳು ಅಥವಾ ದಪ್ಪ ರಕ್ಷಣಾತ್ಮಕ ಗೋಡೆಗಳು ಅವಶ್ಯಕವಾಗಬಹುದು. ಚಂದ್ರನ ಮೇಲ್ಮೈ ಧೂಳಿ(Lunar Regolith) ಅತ್ಯಂತ ಸೂಕ್ಷ್ಮ ಮತ್ತು ತೀಕ್ಷ್ಣ ಕಣಗಳನ್ನು ಹೊಂದಿದೆ. ಇದು ಉಸಿರಾಟದ ಸಮಸ್ಯೆಗಳಿಗೆ ಕಾರಣವಾಗುವುದಲ್ಲದೆ ಯಂತ್ರೋಪಕರಣಗಳ ಹಾನಿಗೂ ಕಾರಣವಾಗಬಹುದು. ಈ ಧೂಳಿನ ನಿಯಂತ್ರಣಕ್ಕಾಗಿ ವಿಶೇಷ ಶೋಧನ ತಂತ್ರಜ್ಞಾನಗಳ ಅಗತ್ಯವಿದೆ.
ರಾಸಾಯನಿಕ ಸಂಪನ್ಮೂಲಗಳು: ನೀರಿನ ಆಶಾಕಿರಣ
ಚಂದ್ರನ ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಹಿಮ ರೂಪದ ನೀರಿನ ಅಸ್ತಿತ್ವ ಪತ್ತೆಯಾಗಿದೆ. ಭಾರತೀಯ ಅಂತರಿಕ್ಷ ಸಂಶೋಧನಾ ಸಂಸ್ಥೆ ನಡೆಸಿದ ಮಿಷನ್ ಚಂದ್ರಯಾನ–1 ನೀರಿನ ಅಣುಗಳ ಸನ್ನಿವೇಶಕ್ಕೆ ಪ್ರಬಲ ಸಾಕ್ಷ್ಯ ಒದಗಿಸಿತು. ನೀರು ಮಾನವ ಜೀವನದ ಮೂಲಾಧಾರ. ಇದನ್ನು ಕುಡಿಯಲು, ಆಮ್ಲಜನಕ ಉತ್ಪಾದನೆಗೆ ಹಾಗೂ ಹೈಡ್ರೋಜನ್–ಆಕ್ಸಿಜನ್ ಇಂಧನ ತಯಾರಿಕೆಗೆ ಬಳಸಬಹುದು. ಚಂದ್ರನ ಮಣ್ಣಿನಲ್ಲಿ ಹೀಲಿಯಂ–3 ಎಂಬ ಐಸೋಟೋಪ್(ಹೈಡ್ರೋಜನ್ ಸಮಸ್ಥಾನಿ) ಅಸ್ತಿತ್ವದಲ್ಲಿರುವ ಸಾಧ್ಯತೆಯೂ ಚರ್ಚೆಯಾಗುತ್ತಿದೆ. ಭವಿಷ್ಯದ ಅಣುಸಂಯೋಜನ ಶಕ್ತಿಗೆ ಇದು ಸಹಕಾರಿ ಆಗಬಹುದು.
ಜೈವಿಕ ಸವಾಲುಗಳು: ಜೀವದ ಸ್ಥಿರತೆ
ಮಾನವ ದೇಹವು ಭೂಮಿಯ ಗುರುತ್ವಾಕರ್ಷಣ, ವಾತಾವರಣದ ಒತ್ತಡ, ರಾಸಾಯನಿಕ ಸಂಯೋಜನೆ ಹಾಗೂ ಜೈವಿಕ ಪರಿಸ್ಥಿತಿಗಳಿಗೆ ಅನುರೂಪವಾಗಿ ಕ್ರಮನ್ವಯಿಕವಾಗಿ ಹೊಂದಿಕೊAಡು ವಿಕಸಿತವಾಗಿದೆ. ಚಂದ್ರನ ಕಡಿಮೆ ಗುರುತ್ವ, ಹೆಚ್ಚಿನ ಕಿರಣಮಟ್ಟ ಮತ್ತು ವಿಭಿನ್ನ ದಿನ–ರಾತ್ರಿ ಚಕ್ರ ಮಾನವ ಜೈವಿಕ ಗಡಿಯ ಮೇಲೆ ಪರಿಣಾಮ ಬೀರುತ್ತವೆ. ಆಹಾರ ಉತ್ಪಾದನೆ ಮತ್ತೊಂದು ಸವಾಲು. ಹಸಿರುಮನೆ ತಂತ್ರಜ್ಞಾನದಿAದ ಸಸ್ಯ ಬೆಳವಣಿಗೆ ಪ್ರಯೋಗಗಳು ನಡೆಯುತ್ತಿವೆ. ಚಂದ್ರ ಮೇಲ್ಮೈ ಧೂಳಿಪದರವನ್ನು ಶೋಧಿಸಿ ಕೃಷಿಗೆ ಬಳಸುವ ಪ್ರಯತ್ನಗಳೂ ಪ್ರಗತಿಯಲ್ಲಿವೆ. ಜೀವಕೋಶಗಳ ಮೇಲೆ ಕಿರಣಗಳ ಪರಿಣಾಮ, ಡಿಎನ್ಎ ಹಾನಿ, ರೋಗನಿರೋಧಕ ಶಕ್ತಿಯ ಕುಗ್ಗುಮಟ್ಟ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳು ವಿಜ್ಞಾನಿಗಳ ಅಧ್ಯಯನದ ಪ್ರಮುಖ ಕ್ಷೇತ್ರಗಳಾಗಿವೆ.
ಭವಿಷ್ಯದ ದಾರಿ
ಚಂದ್ರನಲ್ಲಿ ಮಾನವ ವಾಸ ಸ್ಥಾಪನೆ ಕೇವಲ ಕನಸಲ್ಲ; ಅದು ಹಂತ ಹಂತವಾಗಿ ರೂಪುಗೊಳ್ಳುತ್ತಿರುವ ವೈಜ್ಞಾನಿಕ ಯೋಜನೆ. ಚಂದ್ರನು ಭವಿಷ್ಯದ ಬಾಹ್ಯಾಕಾಶ ಸಂಶೋಧನೆಗೆ ಆಧಾರಕೇಂದ್ರವಾಗಬಹುದು. ಮಂಗಳಗ್ರಹದತ್ತ ಪ್ರಯಾಣಿಸಲು ಇದು ಮಧ್ಯಂತರ ನೆಲೆಯಾಗಬಹುದು. ಆದರೆ ತಂತ್ರಜ್ಞಾನ, ಆರ್ಥಿಕ ವೆಚ್ಚ ಮತ್ತು ಮಾನವ ಸುರಕ್ಷತೆ ಎಂಬ ಮೂರು ಪ್ರಮುಖ ಅಂಶಗಳು ಯಶಸ್ಸಿನ ಕೀಲಿಗಳು. ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರದ ನಿಯಮಗಳನ್ನು ಸಮಗ್ರವಾಗಿ ಅರ್ಥಮಾಡಿಕೊಂಡು, ಅವುಗಳಿಗೆ ಹೊಂದುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರೆ, ಮಾನವ ಜೀವನ ಚಂದ್ರನ ಮೇಲೆ ಸ್ಥಾಪನೆ ಅಸಾಧ್ಯವಲ್ಲ. ಆದರೆ, ಅದು ಸುಲಭ ಸಾಧನೆಯೂ ಅಲ್ಲ!
ಒಟ್ಟಿನಲ್ಲಿ ಹೇಳಬೇಕೆಂದರೆ, ಚಂದ್ರನಲ್ಲಿ ಮಾನವ ವಾಸ ಸಾಧ್ಯತೆಗಳು ಉಜ್ವಲವಾಗಿದ್ದರೂ, ಸವಾಲುಗಳು ಗಂಭೀರವಾಗಿವೆ. ವಿಜ್ಞಾನ ಮತ್ತು ತಂತ್ರಜ್ಞಾನದ ಸಮನ್ವಯ ಪ್ರಯತ್ನಗಳಿಂದ ಈ ಅಡೆತಡೆಗಳನ್ನು ನಿವಾರಿಸುವ ದಿಕ್ಕಿನಲ್ಲಿ ಮಾನವಕುಲ ಮುಂದುವರಿಯುತ್ತಿದೆ. ಭೂಮಿಯಾಚೆಯ ಜೀವನದ ಹೊಸ ಅಧ್ಯಾಯಕ್ಕೆ ಚಂದ್ರನು ಮೊದಲ ಹೆಜ್ಜೆಯಾಗಬಹುದೇ? ಈ ಪ್ರಶ್ನೆಗೆ ಉತ್ತರ ನೀಡುವ ಕಾಲವು ದೂರದಲ್ಲಿಲ್ಲ.
ಪ್ರೊ. ಸತೀಶ್. ಎಲ್.ಎ
ಭೌತಶಾಸ್ತ್ರ ಪ್ರಾಧ್ಯಾಪಕರು
lasgayit@gmail.com
