ಹೊಸದಿಲ್ಲಿ: ಶುಕ್ರವಾರ ಚಂದ್ರನ ಮೇಲೆ ಗಗನ ನೌಕೆಯನ್ನು ಇಳಿಸುವ ಮೂಲಕ, ಆ ಚಾರಿತ್ರಿಕ ಸಾಧನೆ ಮಾಡಿದ ಐದನೇ ದೇಶವೆಂಬ ಕೀರ್ತಿಗೆ ಜಪಾನ್ ಭಾಜನವಾಗಿದೆ. ಇದಕ್ಕೂ ಮುನ್ನ, ಅಮೆರಿಕಾ, ರಶ್ಯಾ, ಚೀನಾ ಮತ್ತು ಭಾರತ ದೇಶಗಳು ಮಾತ್ರ ಈ ಸಾಧನೆಗೈದಿವೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.
‘ಮೂನ್ ಸ್ನೈಪರ್’ ಎಂದು ಕರೆಯಲಾಗುವ ಸ್ಮಾರ್ಟ್ ಲ್ಯಾಂಡರ್ ಫಾರ್ ಇನ್ವೆಸ್ಟಿಗೇಟಿಂಗ್ ಮೂನ್ ನೌಕೆಯನ್ನು ಸೂಕ್ಷ್ಮ ತಂತ್ರಜ್ಞಾನ ಬಳಸಿ ಚಂದ್ರನ ದಕ್ಷಿಣ ಧ್ರುವದ ಸಮಾನಾಂತರ ರೇಖೆ ಬಳಿಯಿರುವ ಇಳಿಜಾರು ಕುಳಿಯಲ್ಲಿ ಇಳಿಸುವಲ್ಲಿ ಜಪಾನ್ ಅಂತರಿಕ್ಷ ಯಾನ ಸಂಶೋಧನಾ ಸಂಸ್ಥೆಯು ಯಶಸ್ವಿಯಾಗಿದೆ. ಗಗನ ನೌಕೆಯ ಸ್ಪರ್ಶವು ತೀರಾ ಕ್ಲಿಷ್ಟಕರ ಪ್ರದೇಶದಲ್ಲಿ ಆಗಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಪಾನ್ ಅಂತರಿಕ್ಷ ಯಾನ ಸಂಶೋಧನಾ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಶಿನಿಚಿರೊ ಸಕಾಯಿ, “ಇಂಥ ಸಾಧನೆಯನ್ನು ಬೇರಾವ ದೇಶಗಳೂ ಮಾಡಿಲ್ಲ. ಜಪಾನ್ ಬಳಿ ಇಂತಹ ಸೂಕ್ಷ್ಮ ತಂತ್ರಜ್ಞಾನವಿದೆ ಎಂದು ನಿರೂಪಿಸುವ ಮೂಲಕ, ಈ ತಂತ್ರಜ್ಞಾನವು ಅರ್ಟೆಮಿಸ್ ನಂತಹ ಭವಿಷ್ಯದ ಅಂತಾರಾಷ್ಟ್ರೀಯ ಕಾರ್ಯಾಚರಣೆಗಳಿಗೆ ಬಹು ದೊಡ್ಡ ಲಾಭ ತಂದಿದೆ” ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, 2025ರಲ್ಲಿ ಭಾರತದೊಂದಿಗೆ ಮಾನವ ರಹಿತ ಚಂದ್ರ ಯಾನ ಕೈಗೊಳ್ಳುವ ಯೋಜನೆಯನ್ನೂ ಜಪಾನ್ ಹೊಂದಿದೆ.