ಹುಣಸೂರು, ಡಿ.26: ಕೊಡಗಿನ ಮಲೆನಾಡು ವಲಯಕ್ಕೆ ಹೊಂದಿಕೊಂಡಂತೆ ಇರುವ ಹುಣಸೂರಿನಲ್ಲಿ ಅವರೆಕಾಯಿ ವ್ಯಾಪಾರ ಸಂಪದ್ಬರಿತ ವ್ಯಾಪಾರವಾಗಿದ್ದು, ನವೆಂಬರ್ ಕಳೆದು ಡಿಸೆಂಬರ್ನ ಮಾಗಿಯ ಚಳಿಗಾಲ ಬರುತ್ತಿದಂತೆ ಬಿಸಿ ಬಿಸಿಯೂಟಕ್ಕೆ ಅವರೆಕಾಯಿ ಸೊಗಡು ಜನರನ್ನು ಆಕರ್ಷಿಸುತ್ತದೆ ಹಾಗೂ ಎಲ್ಲರ ಬಾಯಲ್ಲೂ ನೀರು ತರಿಸುತ್ತದೆ.
ಮೈಸೂರು ಜಿಲ್ಲೆಯ ಹುಣಸೂರು ಸುತ್ತ ಮುತ್ತ ಬೆಳೆಯುವ ಅವರೆಕಾಯಿ ಬೆಂಗಳೂರು, ದೊಡ್ಡಬಳ್ಳಾಪುರ, ಪಾವಗಡ, ಸತ್ತಿ, ತುಮಕೂರು, ಮಂಗಳೂರು, ಬಾಂಬೆ, ಚೆನೈ, ತಮಿಳುನಾಡು, ಆಂಧ್ರಪ್ರದೇಶಗಳಿಗೆ ರಫ್ತಾಗುತ್ತಿದೆ.
ಈ ಬಾರಿ ಹಿಂಗಾರು ಮಳೆ ಸರಿಯಾಗಿ ಆಗದೆ ಕೆಲವು ಕಡೆ ಬಿತ್ತನೆ ಹಾಳಾಗಿ ಕಳೆದ ಬಾರಿಗಿಂತ ಈ ಬಾರಿ ಇಳುವರಿ ಕಡಿಮೆಯಾಗಿದೆ. ಅವರೆಯ ಸೊಗಡು ಎಲ್ಲರ ಮೂಗನ್ನು ತಾಕಿ ಮನ ಸೆಳೆಯುತ್ತದೆ. ಜನರನ್ನು ಮುಗಿ ಬೀಳಿಸುವಂತೆ ಮಾಡುತ್ತದೆ. ನವೆಂಬರ್ ಕೊನೆಯ ವಾರದಲ್ಲಿ ಪ್ರಾರಂಭವಾಗುವ ಅವರೆಕಾಯಿ ಮಾರಾಟ ಡಿಸೆಂಬರ್ ಮಾಹೆಯಲ್ಲಿ ಬಿರುಸಾಗಿ ನಡೆಯುತ್ತದೆ. ಈ ಬಾರಿ ಇಳುವರಿ ಕಡಿಮೆ ಇದ್ದರೂ ಪ್ರತಿದಿನ 40ರಿಂದ 50ಟನ್ ಅವರೆಕಾಯಿ ತಾಲೂಕಿನಲ್ಲಿ ಮಾರಾಟವಾಗುತ್ತಿದೆ. ಬನ್ನಿಕುಪ್ಪೆ ಮುಖ್ಯಾರಸ್ತೆಯಲ್ಲಿ ಪ್ರತೀ ದಿನ 25 ಟನ್, ಎಪಿಎಂಸಿ ಯಲ್ಲಿ 10 ಟನ್, ಅಲ್ಲದೆ ತಾಲೂಕಿನ ವಿವಿಧೆಡೆ ಅವರೆ ಕಾಯಿ ವ್ಯಾಪಾರ ಬಿರುಸಿನಿಂದ ಸಾಗಿದೆ.
ಹುಣಸೂರು ತಾಲೂಕಿನಲ್ಲಿ ಕಳೆದ ಭಾರಿ 9,850 ಹೆಕ್ಟರ್ ಪ್ರದೇಶದಲ್ಲಿ ಬೆಳೆದಿದ್ದ ಅವರೆ ಈ ಭಾರಿ ಮಳೆಯ ಕೊರತೆಯಿಂದ 6,400 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಕಳೆದ ಬಾರಿ ತಾಲೂಕಿನ ಕಸಬಾ ಹೋಬಳಿಯಲ್ಲಿ 3,450 ಹೆಕ್ಟರ್, ಬಿಳಿಕೆರೆ ಹೋಬಳಿಯಲ್ಲಿ 1,995 ಹೆಕ್ಟರ್, ಗಾವಡಗೆರೆ ಹೋಬಳಿಯಲ್ಲಿ 2,825 ಹೆಕ್ಟರ್, ಹನಗೋಡು ಹೋಬಳಿಯಲ್ಲಿ 1,580 ಹೆಕ್ಟರ್ ಪ್ರದೇಶದಲ್ಲಿ ಬೇಳೆಯಲಾಗಿದ್ದ ಅವರೆ ಈ ಬಾರಿ ಕಸಬಾ ಹೋಬಳಿಯಲ್ಲಿ 2,350 ಹೆಕ್ಟರ್, ಬಿಳಿಕೆರೆ ಹೋಬಳಿಯಲ್ಲಿ 1,250 ಹೆಕ್ಟರ್, ಗಾವಡಗೆರೆ ಹೋಬಳಿಯಲ್ಲಿ 1,650 ಹೆಕ್ಟರ್ ಅವರೆ ಬೆಳೆಯಲಾಗಿದೆ. ಕಳೆದ ಭಾರಿ ಒಂದು ಹೆಕ್ಟರ್ಗೆ 20 ರಿಂದ 25 ಕ್ವಿಂಟಾಲ್ ಇಳುವರಿ ಬಂದಿದ್ದ ಅವರೆ ಈ ಭಾರಿ 15ರಿಂದ 18ಕ್ವಿಂಟಾಲ್ ಇಳುವರಿ ಬರುತ್ತದೆ ಎಂದು ಅಂದಾಜು ಮಾಡಲಾಗಿತ್ತು.
ಈ ಬಾರಿ ಸಾಧಾರಣ ಇಳುವರಿ ಬಂದಿರುವುದರಿಂದ ಅವರೆಕಾಯಿಗೆ ಭಾರೀ ಬೆಡಿಕೆ ಇದ್ದು, ಬೆಲೆಯು ಹೆಚ್ಚಾಗಿದ್ದು, ಅವರೆ ಬೆಳೆದ ರೈತರು ಖುಷಿಯಾಗಿದ್ದಾರೆ.ಒಂದು ಕೆಜಿಗೆ 45ರೂ. ರಿಂದ 50ರೂ. ದೊರೆಯುತ್ತಿದೆ.
ರೈತರು ಅವರೆ ಬಿತ್ತನೆಯನ್ನು ಸರಿಯಾಗಿ ಮಳೆ ಬೀಳುವ ಸಮಯದಲ್ಲಿ ಬಿತ್ತನೆಯನ್ನು ಮಾಡಿದರೆ ಮತ್ತು ಕಾಯಿಗಳು ಕೊರಕ ಹುಳು ಹಾವಳಿಯನ್ನು ಕ್ರಿಮಿನಾಶಕಗಳಿಂದ ತಡೆದುಕೊಂಡರೆ ಉತ್ತಮ ಇಳುವರಿ ಕಾಣಬಹುದು. ಅಲ್ಲದೇ ಲಘು ಪೂಷಕಾಂಶ ಮಿಶ್ರಣ ಸ್ಪ್ರೇ ಬಳಕೆ ಮಾಡಿದರೆ ಒಂದು ಹೆಕ್ಟರ್ಗೆ 2 ಕ್ವಿಂಟಾಲ್ ಬೆಳೆಯುವ ಭೂಮಿಯಲ್ಲಿ ನಾಲ್ಕು ಕ್ವಿಂಟಾಲ್ ಬೆಳೆಯಬಹುದು.
– ವೀರಣ್ಣ, ಸಹಾಯಕ ನಿರ್ದೇಶಕ, ಕೃಷಿ ಇಲಾಖೆ