Home ಕರ್ನಾಟಕ ಚಾಮರಾಜನಗರ: ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ 31 ಮಂದಿ ವಿದ್ಯಾರ್ಥಿಗಳು; ಆಸ್ಪತ್ರೆಗೆ ದಾಖಲು

ಚಾಮರಾಜನಗರ: ಮಧ್ಯಾಹ್ನದ ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ 31 ಮಂದಿ ವಿದ್ಯಾರ್ಥಿಗಳು; ಆಸ್ಪತ್ರೆಗೆ ದಾಖಲು

41
0

ಚಾಮರಾಜನಗರ, ಮಾರ್ಚ್, 15: ಮಧ್ಯಾಹ್ನದ ಬಿಸಿಯೂಟ ಸೇವಿಸಿ ಸುಮಾರು 31 ಮಕ್ಕಳು ಅಸ್ವಸ್ಥರಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಚಿರಕನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ನಡೆದಿರುವ ಬಗ್ಗೆ  ವರದಿಯಾಗಿದೆ.

ಚಿರಕನಹಳ್ಳಿ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 7ನೇ ತರಗತಿಯಲ್ಲಿ ಒಟ್ಟು 35 ಮಂದಿ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದು, ಇದರಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಮೊಳಕೆಯೊಡೆದ ಹುರುಳಿ ಕಾಳಿನ ಸಾಂಬರ್ ಸೇವಿಸಿ 14 ಮಂದಿ ಮಕ್ಕಳಿಗೆ ವಾಂತಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೂಡಲೇ ವಿದ್ಯಾರ್ಥಿಗಳನ್ನು ಬೊಮ್ಮನಹಳ್ಳಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಮಕ್ಕಳು ಅಪಾಯಾದಿಂದ ಪಾರಾಗಿದ್ದಾರೆ  ಎಂದು ತಿಳಿದು ಬಂದಿದೆ.

 ಉಳಿದ 17 ಮಂದಿ ವಿದ್ಯಾರ್ಥಿಗಳಿಗೆ ಮಾತ್ರೆ ನೀಡಿ ಮನೆಗೆ ಕಳುಹಿಸಲಾಗಿದ್ದು,  ನಂತರ ಪೋಷಕರ ಒತ್ತಾಯದ ಮೇರೆಗೆ ಅಸ್ವಸ್ಥಗೊಂಡಿದ್ದ 14 ಮಕ್ಕಳು ಹಾಗೂ ಮನೆಗೆ ತೆರಳಿದ್ದ 17 ಮಂದಿ ಸೇರಿದಂತೆ ಒಟ್ಟು 31 ಮಕ್ಕಳನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಾಸನೆ ಬರುತ್ತಿದ್ದ ಸಾಂಬರ್: ಮಧ್ಯಾಹ್ನದ ಬಿಸಿಯೂಟಕ್ಕೆ ತಯಾರಿಸಿದ್ದ ಹುರುಳಿ ಕಾಳನ್ನು ನಾಲ್ಕೈದು ದಿನಗಳ ಹಿಂದೆಯೇ ಮೊಳಕೆಗೆ ಕಟ್ಟಿ ಇಡಲಾಗಿತ್ತು. ಇದರಿಂದ ಮೊಳಕೆ ಕಾಳು ವಾಸನೆ ಬರುತ್ತಿತ್ತು. ಅದನ್ನೇ ಹಾಕಿ ಸಾಂಬರ್ ಮಾಡಿದ ನಂತರವೂ ಹೆಚ್ಚಿನ ವಾಸನೇ ಸೂಸುತ್ತಿತ್ತು. ಹೀಗಿದ್ದರೂ ಕೂಡ ಅಡುಗೆಯವರು ಸಾಂಬರ್ ಮಾಡಿ ಬಡಿಸಿದ ಕಾರಣ ಮಕ್ಕಳು ಅದನ್ನು ಸೇವನೆ ಮಾಡಿದ್ದಾರೆ. ವಾಸನೆ ಬರುತ್ತಿರುವ ಕುರಿತು ಮಕ್ಕಳೇ ನಮಗೆ ಹೇಳಿದ್ದಾರೆ ಎಂದು ಪೋಷಕರಾದ ಸುರೇಶ್ ಎಂಬವರು ಆರೋಪಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಭೇಟಿ: ಚಿರಕನಹಳ್ಳಿ ಶಾಲೆಯಲ್ಲಿ ಮಕ್ಕಳು ಬಿಸಿಯೂಟ ಸೇವಿಸಿ ಅಸ್ವಸ್ಥಗೊಂಡ ಮಾಹಿತಿ ತಿಳಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಜಶೇಖರ್ ಶಾಲೆಗೆ ಭೇಟಿ ನೀಡಿ, ಮಕ್ಕಳು ಸೇವಿಸಿರುವ ಅಡುಗೆಯ ಸ್ಯಾಂಪಲ್ ಪಡೆದು ಪರೀಕ್ಷೆಗೆ ಕಳುಹಿಸಿದ್ದಾರೆ. ಜೊತೆಗೆ ಮಕ್ಕಳ ಆರೋಗ್ಯ ವಿಚಾರಣೆ ನಡೆಸಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಿದ್ದಾರೆ.

LEAVE A REPLY

Please enter your comment!
Please enter your name here