ಚಾಮರಾಜನಗರ, ಮಾ.3: ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೊಳವೆಬಾವಿ ಕೊರೆಸಲು ಅರ್ಜಿದಾರರಿಂದ ರೂ.10 ಸಾವಿರ ಲಂಚ ಪಡೆಯುತ್ತಿದ್ದ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದ ತಾಲೂಕು ಅಭಿವೃದ್ಧಿ ಅಧಿಕಾರಿ ನಾಗರಾಜು ಎಂಬವವರು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ತಾಲೂಕಿನ ಫಲಾನುಭವಿಯೊಬ್ಬರು ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅವರ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಬೇಕಾಗಿತ್ತು. ಕೆಲಸ ಮಾಡಿಕೊಡಲು ನಾಗರಾಜು ಅವರು 10 ಸಾವಿರ ರೂ. ಲಂಚ ಕೇಳಿದ್ದರು. ಈ ಬಗ್ಗೆ ಫಲಾನುಭವಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಶನಿವಾರ ನಗರದಲ್ಲಿ ನಾಗರಾಜು, ದೂರುದಾರರಿಂದ ಹಣ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಅವರನ್ನು ಬಂಧಿಸಿ, 10 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಲೋಕಾಯುಕ್ತ ಡಿವೈಎಸ್ಪಿ ಮ್ಯಾಥ್ಯೂ ಥಾಮಸ್ ಮಾರ್ಗದರ್ಶನದಲ್ಲಿ ಇನ್ ಸ್ಪೆಕ್ಟರ್ ಶಶಿಕುಮಾರ್ ಮತ್ತು ತಂಡ ಕಾರ್ಯಾಚರಣೆ ನಡೆಸಿದೆ.