Home ಕರ್ನಾಟಕ ಚಿಕ್ಕಮಗಳೂರು| ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳ ಹಂಚಿಕೆ ಆರೋಪ: ಓರ್ವನ ಬಂಧನ

ಚಿಕ್ಕಮಗಳೂರು| ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋಗಳ ಹಂಚಿಕೆ ಆರೋಪ: ಓರ್ವನ ಬಂಧನ

35
0

ಚಿಕ್ಕಮಗಳೂರು: ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್‍ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಕಳುಹಿಸುತ್ತಿದ್ದ ಆರೋಪದ ಮೇರೆಗೆ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಯುವಕನೊಬ್ಬನ ಮೇಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಪಂ ವ್ಯಾಪ್ತಿಯ ಕುಚಿಗೆರೆ ಗ್ರಾಮದ ಪ್ರಜ್ವಲ್(21) ಬಂಧಿತ ಆರೋಪಿಯಾಗಿದ್ದಾನೆ. ಈತ ಇತ್ತೀಚೆಗೆ ವ್ಯಕ್ತಿಯೊಬ್ಬರ ವಾಟ್ಸಪ್ ನಂಬರ್ ಗೆ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಪ್ರಕರಣದ ಅಶ್ಲೀಲ ವಿಡಿಯೋಗಳ ಲಿಂಕ್ ಕಳುಹಿಸುವುದಾಗಿ ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್, ಫೇಸ್‍ಬುಕ್ ಪೇಜ್‍ಗಳಲ್ಲಿ ಅಶ್ಲೀಲ ವಿಡಿಯೋಗಳ ಚಿತ್ರಗಳನ್ನು ಪೋಸ್ಟ್ ಹಾಕಿದ್ದ. ಅಲ್ಲದೇ ಈ ಚಿತ್ರಗಳ ಕೆಳಗೆ ಅಶ್ಲೀಲ ವಾಕ್ಯಗಳನ್ನು ಬರೆದಿದ್ದ ಎಂದು ಆರೋಪಿಸಲಾಗಿದೆ.

ಟೆಲಿಗ್ರಾಮ್, ಇನ್‍ಸ್ಟಾಗ್ರಾಮ್‍ಗಳಲ್ಲಿನ ನಂಬರ್‍ಗಳಿಗೆ ಕರೆ ಮಾಡಿ, ತಾನು ಬೆಂಗಳೂರಿನ ಟೆಕ್ನಿಕಲ್ ಆಪರೇಷನ್ ಸಪೋರ್ಟಿವ್ ಆಕ್ಟಿವಿಟೀಸ್ ಆಫ್ ಸಿಒಪಿ ಎಂದು ಪರಿಚಯ ಮಾಡಿಕೊಂಡು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳ ಲಿಂಕ್ ಕಳುಹಿಸುವುದಾಗಿ ಹೇಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಎನ್ನಲಾಗಿದೆ. ಹೀಗೆ ವ್ಯಕ್ತಿಯೊಬ್ಬರ ವಾಟ್ಸ್‌ ಆ್ಯಪ್ ನಂಬರ್ ಗೆ ಈತ ಕಳುಹಿಸಿದ್ದ ಲಿಂಕ್ ತೆರೆದಾಗ ಅದರಲ್ಲಿ ಹಲವಾರು ಮಹಿಳೆಯರ ಅಶ್ಲೀಲ ವಿಡಿಯೋಗಳು ಇರುವುದು ಕಂಡು ಬಂದಿದೆ.

ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಮಹಿಳೆಯರ ಖಾಸಗಿತನ ಹಾಗೂ ಗೌರವಕ್ಕೆ ತರುತ್ತಿದ್ದ ಆರೋಪದ ಮೇರೆಗೆ ಕುದುರೆಮುಖ ಪೊಲೀಸರು ಮಾಹಿತಿ ತಂತ್ರಜ್ಞಾನ ಕಾಯ್ದೆ-2008ರಡಿಯಲ್ಲಿ ಪ್ರಜ್ವಲ್ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here