ಚಿತ್ರದುರ್ಗ: ಮನೆಯೊಂದರಲ್ಲಿ ಒಂದೇ ಕುಟುಂಬದ ಐವರ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿರುವ ಘಟನೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಚಳ್ಳಕೆರೆ ಗೇಟ್ ಸಮೀಪದಲ್ಲಿ ಜಗನ್ನಾಥ ರೆಡ್ಡಿ ಎಂಬ ನಾಮಫಲಕ ಇರುವ ಪಾಳುಬಿದ್ದ ಮನೆಯಲ್ಲಿ ಅಸ್ಥಿಪಂಜರ ಪತ್ತೆಯಾಗಿವೆ.
ಕಳೆದ ಕೆಲ ವರ್ಷಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಮನೆಯಲ್ಲಿ ಅಸ್ಥಿಪಂಜರಗಳು ಇರುವುದು ಗುರುವಾರ ರಾತ್ರಿ ಗೊತ್ತಾಗಿದೆ. ಬಳಿಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಅಸ್ಥಿಪಂಜರಗಳು ಇರುವುದು ಖಚಿತವಾಗಿದೆ. ಮೃತದೇಹ ಮೂಳೆ ಕಾಣುವ ಸ್ಥಿತಿಯಲ್ಲಿ ಇದ್ದು, ಶ್ವಾನದಳ ಸ್ಥಳ ಪರಿಶೀಲನೆ ನಡೆಸಿದೆ.
ಕುಟುಂಬವು ಸಂಪೂರ್ಣವಾಗಿ ಏಕಾಂತ ಜೀವನ ನಡೆಸುತ್ತಿತ್ತು ಮತ್ತು ತೀವ್ರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಅಲ್ಲದೆ 2019 ರಲ್ಲಿ ನಾವು ಅವರನ್ನು ಕಡೆಯ ಬಾರಿ ನೋಡಿದ್ದೆವು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.
ಪೊಲೀಸರು ಬಾಗಿಲು ಮನೆಯ ತೆರೆದಾಗ ಒಂದು ಕೋಣೆಯಲ್ಲಿ ನಾಲ್ಕು ಅಸ್ಥಿಪಂಜರಗಳು (ಎರಡು ಹಾಸಿಗೆಯ ಮೇಲೆ ಮತ್ತು ಎರಡು ನೆಲದ ಮೇಲೆ) ಕಂಡುಬಂದರೆ, ಬೇರೆ ಕೋಣೆಯಲ್ಲಿ ಮತ್ತೊಂದು ಅಸ್ಥಿಪಂಜರ ಕಂಡುಬಂದಿದೆ ಎಂದು ಗೊತ್ತಾಗಿದೆ.
ಸ್ಥಳಕ್ಕೆ ಡಿವೈಎಸ್ ಪಿ ಅನಿಲ್ ಕುಮಾರ್, ಸಿಪಿಐ ನಹಿಂ ಅಹಮದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.