Home Uncategorized ಚುನಾವಣಾ ಆಯುಕ್ತರ ಮಸೂದೆಗೆ ಕೆಲವೊಂದು ಬದಲಾವಣೆ ಮಾಡಿದ ಕೇಂದ್ರ

ಚುನಾವಣಾ ಆಯುಕ್ತರ ಮಸೂದೆಗೆ ಕೆಲವೊಂದು ಬದಲಾವಣೆ ಮಾಡಿದ ಕೇಂದ್ರ

20
0

ಹೊಸದಿಲ್ಲಿ: ಇಂದು ರಾಜ್ಯಸಭೆಯಲ್ಲಿ ಮಂಡನೆಯಾಗಲಿರುವ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ನಿಯಮಗಳು ಮತ್ತು ಸೇವಾವಧಿ) ಮಸೂದೆ 2023ರಲ್ಲಿ ಕೇಂದ್ರ ಸರ್ಕಾರ ಕೆಲವೊಂದು ಬದಲಾವಣೆಗಳನ್ನು ಮಾಡಿದೆ. ವಿಪಕ್ಷಗಳು ಮತ್ತು ಕೆಲ ಮಾಜಿ ಮುಖ್ಯ ಚುನಾವಣಾಧಿಕಾರಿಗಳ ಆಕ್ಷೇಪದ ನಂತರ ಈ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಹೇಳಲಾಗಿದೆ.

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ ಆಯ್ಕೆಗಾಗಿ ಪ್ರಧಾನಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಮತ್ತು ವಿಪಕ್ಷ ನಾಯಕನನ್ನೊಳಗೊಂಡ ಸಮಿತಿ ರಚಿಸುವಂತೆ ಸುಪ್ರೀಂ ಕೋರ್ಟ್‌ ಮಾರ್ಚ್‌ ತಿಂಗಳಿನಲ್ಲಿ ತನ್ನ ತೀರ್ಪೊಂದರಲ್ಲಿ ಹೇಳಿದ ಹಿನ್ನೆಲೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಗುತ್ತಿದೆ. ಆದರೆ ಆಯುಕ್ತರ ನೇಮಕಾತಿಗಾಗಿ ಇರುವ ಸಮಿತಿಯಲ್ಲಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಟ್ಟು ಕೇಂದ್ರ ಸಚಿವರನ್ನು ನೇಮಿಸಲಾಗುವುದು ಎಂದು ಮಸೂದೆ ತಿಳಿಸುತ್ತದೆ.

ಚುನಾವಣಾ ಆಯುಕ್ತರ ನೇಮಕಾತಿಗಾಗಿ ಕೊಲೀಜಿಯಂ ಮಾದರಿ ವ್ಯವಸ್ಥೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಂತರ ಸುಪ್ರೀಂ ಕೋರ್ಟ್‌ ತೀರ್ಪು ಬಂದಿತ್ತು. ಲೋಕಸಭೆಯಲ್ಲಿ ವಿಪಕ್ಷ ನಾಯಕರಿಲ್ಲದೇ ಇದ್ದರೆ ಅತ್ಯಂತ ದೊಡ್ಡ ವಿಪಕ್ಷದ ಪ್ರತಿನಿಧಿ ಈ ಸಮಿತಿಯಲ್ಲಿರಬಹುದೆಂದು ಸುಪ್ರೀಂ ಕೋರ್ಟ್‌ ಹೇಳಿತ್ತು. ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರಿಗೆ ಈ ಹಿಂದೆ ಇದ್ದ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಸ್ಥಾನಮಾನವನ್ನು ಕೈಬಿಟ್ಟು ಮಸೂದೆ ಮಂಡಿಸಲು ನಿರ್ಧರಿಸಲಾಗಿತ್ತಾದರೂ ವಿಪಕ್ಷಗಳ ಆಕ್ಷೇಪದ ನಡುವೆ ಆಯುಕ್ತರಿಗೆ ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಸ್ಥಾನಮಾನ ಮುಂದುವರಿಸಲು ನಿರ್ಧರಿಸಲಾಗಿದೆ.

ಆದರೆ ಚುನಾವಣಾ ಆಯುಕ್ತರ ನೇಮಕಾತಿ ಸಮಿತಿಯಿಂದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳನ್ನು ಕೈಬಿಡುವ ಹಾಗೂ ಆ ಸ್ಥಾನದಲ್ಲಿ ಕೇಂದ್ರ ಸಚಿವರನ್ನು ಹೊಂದುವ ತನ್ನ ನಿರ್ಧಾರದಿಂದ ಸರ್ಕಾರ ಹಿಂದೆ ಸರಿದಿಲ್ಲ.

LEAVE A REPLY

Please enter your comment!
Please enter your name here