ಜನರ ನಿರೀಕ್ಷೆಗಳ ಈಡೇರಿಸಬೇಕಿದ್ದು, ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಖಡಕ್ ಸೂಚನೆ ನೀಡಿದ್ದಾರೆ. ಬೆಂಗಳೂರು: ಜನರ ನಿರೀಕ್ಷೆಗಳ ಈಡೇರಿಸಬೇಕಿದ್ದು, ಕಾಲಮಿತಿಯೊಳಗೆ ಕರ್ತವ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಖಡಕ್ ಸೂಚನೆ ನೀಡಿದ್ದಾರೆ.
ಹಿರಿಯ ಐಎಎಸ್ ಅಧಿಕಾರಿಗಳೊಂದಿಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚೊಚ್ಚಲ ಸಭೆಯನ್ನು ನಡೆಸಿದರು. ಸಭೆ ವೇಳೆ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದರು.
ನನ್ನ ರಾಜಕೀಯ ಜೀವನದಲ್ಲಿ ತಪ್ಪು ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿಲ್ಲ. ಆದರೆ, ನಿಮ್ಮಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬಂದರೆ ಸಹಿಸುವುದಿಲ್ಲ. ಉತ್ತಮ ಆಡಳಿತ ನೀಡಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಹೇಳಿದರು.
ಜನರ ನಿರೀಕ್ಷೆಗಳನ್ನು ಈಡೇರಿಸಬೇಕಿದ್ದು, ಅವರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ. ಸದೃಢ ಸರ್ಕಾರ ಇಲ್ಲದಿದ್ದಾಗ ಜನರ ನಿರೀಕ್ಷೆಗಳಿಗೆ ಉತ್ತರ ನೀಡಲು ಸಾಧ್ಯವಿಲ್ಲ. ಸರ್ಕಾರದ ಮೇಲೆ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಇದಕ್ಕಾಗಿಯೇ ನಮ್ಮ ಪಕ್ಷವನ್ನು ಆಯ್ಕೆ ಮಾಡಿದ್ದಾರೆ. ಹಿಂದಿನ ಸರ್ಕಾರದಲ್ಲಿ ಭ್ರಷ್ಟಾಚಾರ ಹೆಚ್ಚಾಗಿತ್ತು. ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದವು. ಈ ದೃಷ್ಟಿ ನಮ್ಮ ಸರ್ಕಾರದ ಮೇಲೆ ಬರಬಾರದು. ಗುಣಮಟ್ಟದ ಕಾಮಗಾರಿ ನೀಡಿ, ಕಣ್ಣು ಮುಚ್ಚುವ ಸಹಿ ಹಾಕುವುದನ್ನು ನಿಲ್ಲಿಸಿ ಎಂದು ಸೂಚಿಸಿದರು.
ಸರ್ಕಾರದ ಕಾಮಗಾರಿಗಳನ್ನು ಫಲಾನುಭವಿಗಳಿಗೆ ತಲುಪಿಸುವ ಅಗತ್ಯವಿದೆ. ಇದನ್ನು ಅಧಿಕಾರಿಗಳು ನಿಗಾ ವಹಿಸಬೇಕಿದ್ದು, ಕ್ಷೇತ್ರಕ್ಕೆ ತಲುಪಿಸುವ ಕೆಲಸ ಮಾಡಬೇಕು. ಕಚೇರಿಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸುತ್ತಿರಬೇಕೆಂದು ಆದೇಶಿಸಿದರು.