ಹೊಸದಿಲ್ಲಿ: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ನಾಗರಿಕರಿಗೆ ಚಿತ್ರಹಿಂಸೆಗೆ ಸಂಬಂಧಿಸಿದ ವರದಿಯನ್ನು 24 ಗಂಟೆಗಳೊಳಗೆ ತೆಗೆದು ಹಾಕುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ʼದಿ ಕಾರವಾನ್ʼ ಮ್ಯಾಗಝಿನ್‌ಗೆ ಐಟಿ ಕಾಯಿದೆಯ ಸೆಕ್ಷನ್ 69ಎ ಅಡಿಯಲ್ಲಿ ಆದೇಶಿಸಿದೆ.
ಜತೀಂದರ್ ಕೌರ್ ತುರ್ ಅವರು ಬರೆದಿರುವ “ಸ್ಕ್ರೀಮ್ಸ್ ಫ್ರಮ್ ದಿ ಆರ್ಮಿ ಪೋಸ್ಟ್” ಎಂಬ ಸುದ್ದಿಯ ವರದಿ ಮತ್ತು ವೀಡಿಯೋ ಅನ್ನು 24 ಗಂಟೆಗಳೊಳಗೆ ತೆಗೆದುಹಾಕಬೇಕೆಂದು ಆದೇಶಿಸಲಾಗಿದೆ ಎಂದ ದಿ ಕಾರವಾನ್ ಹೇಳಿದೆ.
ದಿ ಕ್ಯಾರವಾನ್ ಈ ಆದೇಶವನ್ನು ಪಾಲಿಸದೇ ಇದ್ದರೆ ವರದಿಗೆ ಸಂಬಂಧಿಸಿದ ಯುಆರ್‌ಎಲ್ ಅನ್ನು ಬ್ಲಾಕ್ ಮಾಡಲಾಗುವುದು ಎಂದೂ ತಿಳಿಸಲಾಗಿದೆ ಎಂದು ತಿಳಿದು ಬಂದಿದೆ.
ಜಮ್ಮು ಕಾಶ್ಮೀರದ ಪೂಂಛ್-ರಜೌರಿ ಪ್ರದೇಶದಲ್ಲಿ ಉಗ್ರವಾದಿಗಳೊಂದಿಗಿನ ಗುಂಡಿನ ಚಕಮಕಿಯ ನಂತರ ಭಾರತೀಯ ಸೇನೆಯ ರಾಷ್ಟ್ರೀಯ ರೈಫಲ್ಸ್ ರೆಜಿಮೆಂಟ್ ವಿಚಾರಣೆಗೆಂದು ಕರೆದೊಯ್ದ ಮೂವರು ನಾಗರಿಕ ಸಾವಿಗೆ ಸಂಬಂಧಿಸಿದ ವರದಿಯನ್ನು ದಿ ಕಾರವಾನ್ ಪ್ರಕಟಿಸಿತ್ತು.
ಮಾಹಿತಿದಾರರಾಗಿ ಕೆಲಸ ಮಾಡುವ ಜನರನ್ನೂ ಸೇನೆಯು ವಿದ್ಯುತ್ ಶಾಕ್ ಸಹಿತ ಇತರ ರೀತಿಯಲ್ಲಿ ಚಿತ್ರಹಿಂಸೆ ನೀಡಿದೆ ಎನ್ನಲಾದ ವಿವರಗಳನ್ನು ಈ ವರದಿ ನೀಡಿತ್ತು.
ಡಿಸೆಂಬರ್ 22ರಂದು ಸೇನೆಯ ಕೈಯ್ಯಲ್ಲಿ ಟೋಪಾ ಪೀರ್ ಎಂಬಲ್ಲಿ ಹತರಾದ ಸಫೀರ್, ಶಬೀರ್ ಮತ್ತು ಶೌಕತ್ ಎಂಬ ಮೂವರು ವ್ಯಕ್ತಿಗಳ ಕುಟುಂಬಗಳ ಜೊತಗೂ ಈ ಲೇಖನ ಬರೆದ ಪತ್ರಕರ್ತರು ಮಾತನಾಡಿದ್ದರು. ಸಂತ್ರಸ್ತರ ಕುಟುಂಬಗಳಿಗೆ ಸೇನೆ ನಗದು ರೂಪದಲ್ಲಿ ಲಂಚ ನೀಡಿರುವ ಕುರಿತೂ ವರದಿಯಲ್ಲಿ ಉಲ್ಲೇಖಗೊಂಡಿತ್ತು.
ಫೆಬ್ರವರಿ 12ರಂದು ದಿ ಕಾರವಾನ್ ಮ್ಯಾಗಝಿನ್‌ನ ಸಂಪಾದಕರನ್ನು ಸಚಿವಾಲಯ ಬರ ಹೇಳಿತ್ತಲ್ಲದೆ ಈ ಲೇಖನವು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ, ಅದನ್ನು 24 ಗಂಟೆಗಳೊಳಗಾಗಿ ತೆಗೆದುಹಾಕಬೇಕೆಂದು ಸೂಚಿಸಿತ್ತು.
ದಿ ಕಾರವಾನ್ ಈ ಆದೇಶಕ್ಕೆ ಬದ್ಧವಾಗಿ ನಂತರ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದೆ.
ತನಗೆ ಕೇಂದ್ರ ಸಚಿವಾಲಯದಿಂದ ಈ ಲೇಖನವನ್ನು 24 ಗಂಟೆಗಳೊಳಗೆ ತೆಗೆದುಹಾಕಬೇಕೆಂಬ ಆದೇಶ ದೊರಕಿರುವ ಕುರಿತು ದಿ ಕಾರವಾನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡುವ ಮೂಲಕ ಹೇಳಿದೆ.
ಸರ್ಕಾರದ ಆದೇಶ ಗೌಪ್ಯವಾಗಿದೆ ಹಾಗೂ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದೂ ಕಾರವಾನ್ ಹೇಳಿದೆ.