ಹೊಸದಿಲ್ಲಿ: ಜಾಗತಿಕ ಸೂಚ್ಯಂಕಗಳಲ್ಲಿ ಭಾರತದ ಕುಸಿತದಿಂದ ಉಂಟಾಗಿರುವ ಹಿನ್ನಡೆ ಮತ್ತು ಅಂತರರಾಷ್ಟ್ರೀಯ ಗುಂಪುಗಳಿಂದ ತೀವ್ರ ಟೀಕೆಗಳನ್ನು ಎದುರಿಸಲು ತನ್ನದೇ ಆದ ಪ್ರಜಾಪ್ರಭುತ್ವ ಶ್ರೇಯಾಂಕ ಸೂಚ್ಯಂಕವನ್ನು ಅಭಿವೃದ್ಧಿಗೊಳಿಸಲು ನರೇಂದ್ರ ಮೋದಿ ಸರಕಾರವು ಪ್ರಮುಖ ಚಿಂತನ ಚಾವಡಿ ‘ದಿ ಅಬ್ಸರ್ವರ್ ರೀಸರ್ಚ್ ಫೌಂಡೇಷನ್ (ಒಆರ್‌ಎಫ್)’ ನ್ನು ಸಂಪರ್ಕಿಸಿದೆ ಎಂದು aljazeera.com ವರದಿ ಮಾಡಿದೆ.
ಹಲವಾರು ಉಪಕ್ರಮಗಳಲ್ಲಿ ಭಾರತ ಸರಕಾರದೊಂದಿಗೆ ನಿಕಟವಾಗಿ ಕಾರ್ಯಾಚರಿಸುವ ಒಆರ್‌ಎಫ್ ಶ್ರೇಯಾಂಕ ಚೌಕಟ್ಟನ್ನು ಸಿದ್ಧಗೊಳಿಸುತ್ತಿದೆ ಎಂದು ಯೋಜನೆಯಲ್ಲಿ ನಿಕಟವಾಗಿ ತೊಡಗಿಕೊಂಡಿರುವ ಇಬ್ಬರು ವ್ಯಕ್ತಿಗಳನ್ನು ಉಲ್ಲೇಖಿಸಿ Al Jazeera ವರದಿಯು ಹೇಳಿದೆ.
ನೀತಿ ಆಯೋಗವು ಜನವರಿಯಲ್ಲಿ ಪುನರ್‌ಪರಿಶೀಲನೆ ಸಭೆಯನ್ನು ನಡೆಸಿದ್ದು,ಸಭೆಯ ನಿರ್ಧಾರದಂತೆ ಒಆರ್‌ಎಫ್ ಕೆಲವೇ ವಾರಗಳಲ್ಲಿ ಪ್ರಜಾಪ್ರಭುತ್ವ ಶ್ರೇಯಾಂಕಗಳನ್ನು ಬಿಡುಗಡೆಗೊಳಿಸಲಿದೆ ಎಂದು ಹೆಸರು ಹೇಳಿಕೊಳ್ಳಲು ಬಯಸದ ಹಿರಿಯ ಸರಕಾರಿ ಅಧಿಕಾರಿಯೋರ್ವರನ್ನು ವರದಿಯು ಉಲ್ಲೇಖಿಸಿದೆ.
ಹೊಸ ಶ್ರೇಯಾಂಕ ವ್ಯವಸ್ಥೆ ಶೀಘ್ರವೇ ಬಿಡುಗಡೆಗೊಳ್ಳಬಹುದು ಎಂದು ಈ ಅಧಿಕಾರಿ ತಿಳಿಸಿದ್ದಾರೆ.
ಸೂಚ್ಯಂಕ ಅಭಿವೃದ್ಧಿಯಲ್ಲಿ ನೀತಿ ಆಯೋಗವು ನೇರವಾಗಿ ತೊಡಗಿಸಿಕೊಂಡಿಲ್ಲ ಎಂದು ಹೇಳಿದ ನೀತಿ ಆಯೋಗದ ವಕ್ತಾರರು, ದೇಶದಲ್ಲಿ ಸುಧಾರಣೆಗಳು ಮತ್ತು ಬೆಳವಣಿಗೆಯನ್ನು ಹೆಚ್ಚಿಸಲು ಸರಕಾರವು ವಿವಿಧ ಜಾಗತಿಕ ಘಟಕಗಳ ಆಯ್ದ ಸೂಚ್ಯಂಕಗಳ ಮೇಲೆ ನಿಗಾಯಿರಿಸುತ್ತದೆ ಎಂದು ತಿಳಿಸಿದರು.
ಕಳೆದ ಮೂರು ವರ್ಷಗಳಲ್ಲಿ ಪ್ರಜಾಪ್ರಭುತ್ವ, ಪತ್ರಿಕಾ ಸ್ವಾತಂತ್ರ್ಯ, ಉದ್ಯೋಗದರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಹಲವಾರು ಜಾಗತಿಕ ಸೂಚ್ಯಂಕಗಳು ಭಾರತವನ್ನು ಡೌನ್‌ಗ್ರೇಡ್ ಮಾಡಿವೆ. ಹೀಗಾಗಿ ಭಾರತದ ಪ್ರಜಾಪ್ರಭುತ್ವ ವಿಶ್ವಾಸಾರ್ಹತೆಗಳನ್ನು ಪ್ರಶ್ನಿಸಿರುವ ಡೌನ್‌ಗ್ರೇಡಿಂಗ್‌ಗಳನ್ನು ಎದುರಿಸಲು ತನ್ನದೇ ಆದ ಪ್ರಜಾಪ್ರಭುತ್ವ ಶ್ರೇಯಾಂಕ ವ್ಯವಸ್ಥೆಯನ್ನು ಹೊಂದುವುದು ಮೋದಿ ಸರಕಾರಕ್ಕೆ ತುರ್ತು ವಿಷಯವಾಗಿದೆ ಎಂದು ಅಲ್ ಜಝೀರಾ ವಿಶ್ಲೇಷಿಸಿದೆ.