ಹೊಸದಿಲ್ಲಿ: ಜಾತಿ ಗಣತಿ ಅಂಕಿ ಅಂಶಗಳ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕಲ್ಪಿಸುವುದು ಸೇರಿದಂತೆ ಹೊಸ ನೀತಿಗಳ ಆರಂಭಕ್ಕೆ ಬಿಹಾರ ಸರ್ಕಾರ ಸಜ್ಜಾಗಿರುವ ನಡುವೆಯೇ, ಜಾತಿ ಸಮೀಕ್ಷೆಯ ಅಂಕಿ ಅಂಶಗಳನ್ನು ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಬಿಹಾರ ಸರ್ಕಾರಕ್ಕೆ ಸೂಚನೆ ನೀಡಿದೆ. ಆದರೆ ಸರ್ಕಾರದ ಕ್ರಮವನ್ನು ನಿರ್ಬಂಧಿಸಲು ಮಧ್ಯಂತರ ಆದೇಶ ನೀಡಲು ದೇಶದ ಅತ್ಯುನ್ನತ ಕೋರ್ಟ್ ನಿರಾಕರಿಸಿದೆ.
ಜಾತಿಗಣತಿ ಅಂಕಿ ಅಂಶಗಳನ್ನು ಬಹಿರಂಗಪಡಿಸುವ ಮೂಲಕ, ಸರ್ಕಾರ ಕೈಗೊಂಡ ನಿರ್ದಿಷ್ಟ ನಿರ್ಧಾರದ ಹಿನ್ನೆಲೆಯನ್ನು ಸಾರ್ವಜನಿಕರು ಪ್ರಶ್ನಿಸಲು ಅವಕಾಶವ ಮಾಡಿಕೊಡಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಸರ್ಕಾರ ಸಂಗ್ರಹಿಸಿದ ಜಾತಿಗಣತಿ ಅಂಕಿ ಅಂಶಗಳ ವಿವರಗಳನ್ನು ಎಷ್ಟರ ಮಟ್ಟಿಗೆ ಬಹಿರಂಗಪಡಿಸಲು ಸಾಧ್ಯ ಮತ್ತು ಹೇಗೆ ನಾಗರಿಕರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಬಸಹುದು ಎನ್ನುವುದು ನಿಜವಾದ ಕಳಕಳಿ ಎಂದು ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರನ್ನೊಳಗೊಂಡ ಪೀಠ ಹೇಳಿದೆ.
ಈ ಸಮೀಕ್ಷೆಯ ಅಧಿಕೃತತೆಯನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದ ದಾವೆದಾರರ ಪರ ವಕೀಲ ರಾಜು ರಾಮಚಂದ್ರನ್ ಅವರು, ಸಮೀಕ್ಷೆಯ ಅಂಕಿ ಅಂಶಗಳ ಆಧಾರದಲ್ಲಿ ಸರ್ಕಾರ ವೇಗವಾಗಿ ಕ್ರಮ ಕೈಗೊಳ್ಳುತ್ತಿದ್ದು, ಇದನ್ನು ನಿರ್ಬಂಧಿಸಲು ಮಧ್ಯಂತರ ಆದೇಶ ಹೊರಡಿಸಬೇಕು ಎಂದು ಕೋರಿದ್ದರು.