ಹೊಸದಿಲ್ಲಿ: ನೊಂದವರಿಗೆ ಪ್ರಶ್ನಿಸಲು ಸಾಧ್ಯವಾಗುವಂತೆ, ಜಾತಿ ಸಮೀಕ್ಷೆಯ ವಿವರವಾದ ಮಾಹಿತಿಗಳನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಿ ಸುಪ್ರೀಂ ಕೋರ್ಟ್ ಮಂಗಳವಾರ ಬಿಹಾರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಜಾತಿ ಸಮೀಕ್ಷೆ ಮತ್ತು ಜಾತಿ ಸಮೀಕ್ಷೆ ನಡೆಸುವ ಬಿಹಾರ ಸರಕಾರದ ನಿರ್ಧಾರವನ್ನು ಎತ್ತಿಹಿಡಿದ ಪಾಟ್ನಾ ಹೈಕೋರ್ಟಿನ ಆದೇಶವನ್ನು ಅರ್ಜಿದಾರರು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. ಆದರೆ, ಅರ್ಜಿದಾರರಿಗೆ ಮಧ್ಯಂತರ ಪರಿಹಾರವನ್ನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
‘‘ಮಧ್ಯಂತರ ಪರಿಹಾರ ನೀಡುವ ಪ್ರಶ್ನೆಯೇ ಇಲ್ಲ. ಯಾಕೆಂದರೆ ಬಿಹಾರ ಸರಕಾರದ ನಿರ್ಧಾರವನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಈಗ ಸಮೀಕ್ಷೆಯ ದತ್ತಾಂಶಗಳನ್ನು ಸಾರ್ವಜನಿಕರಿಗೆ ಬಿಡುಗಡೆಗೊಳಿಸಲಾಗಿದೆ. ಇಲ್ಲಿ ಎರಡು ಮೂರು ಅಂಶಗಳು ಇತ್ಯರ್ಥವಾಗಬೇಕಾಗಿವೆ. ಮೊದಲನೆಯದು, ಕಾನೂನು ವಿಷಯ. ಹೈಕೋರ್ಟ್ ತೀರ್ಪಿನ ಸಮಂಜಸತೆ ಮತ್ತು ಇಂಥ ಕಸರತ್ತೊಂದರ ಕಾನೂನು ಬದ್ಧತೆ’’ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನ ಮತ್ತು ದೀಪಂಕರ್ ದತ್ತ ಅವರನ್ನೊಳಗೊಂಡ ನ್ಯಾಯಪೀಠವು ಹೇಳಿತು.
ಸಮೀಕ್ಷೆಯ ವರದಿ ಹೊರಬಿದ್ದ ಬಳಿಕ, ಅಧಿಕಾರಿಗಳು ಅದನ್ನು ಮಧ್ಯಂತರವಾಗಿ ಜಾರಿಗೊಳಿಸಲು ಹೊರಟಿದ್ದಾರೆ ಹಾಗೂ ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು, ಇತರ ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಒಟ್ಟು ಈಗಿನ 50 ಶೇಕಡದಿಂದ 75 ಶೇಕಡಕ್ಕೆ ಹೆಚ್ಚಿಸಿದ್ದಾರೆ ಎಂದು ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ರಾಜು ರಾಮಚಂದ್ರನ್ ಹೇಳಿದರು. ಈ ಬಗ್ಗೆ ವಿವರವಾದ ವಿಚಾರಣೆ ನಡೆಯಬೇಕಾಗಿದೆ ಎಂದು ನ್ಯಾಯಪೀಠ ಹೇಳಿತು.
‘‘ಮೀಸಲಾತಿಯ ಹೆಚ್ಚಳಕ್ಕೆ ಸಂಬಂಧಿಸಿ, ನೀವು ಅದನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಬೇಕು’’ ಎಂದು ನ್ಯಾಯಾಲಯವು ರಾಮಚಂದ್ರನ್ ಗೆ ಹೇಳಿತು.
ಬಿಹಾರ ಸರಕಾರದ ಪರವಾಗಿ ಹಾಜರಾದ ಹಿರಿಯ ವಕೀಲ ಶ್ಯಾಮ್ ದಿವಾನ್, ಜಾತಿ ಸಮೀಕ್ಷೆಯ ಅಂಕಿಅಂಶಗಳು, ಅದರ ಎಲ್ಲಾ ವಿವರಗಳು ಸಾರ್ವಜನಿಕರಿಗೆ ಲಭ್ಯವಿವೆ. ನಿರ್ದಿಷ್ಟ ವೆಬ್ ಸೈಟ್ ನಲ್ಲಿ ಯಾರು ಬೇಕಾದರೂ ನೋಡಬಹುದಾಗಿದೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾ. ಖನ್ನಾ, ‘‘ಅಂಕಿಅಂಶಗಳ ವಿವರಗಳನ್ನು ಸರಕಾರ ತಡೆಹಿಡಿದಿದೆ. ಅಂಕಿ ಅಂಶಗಳ ಎಲ್ಲಾ ವಿವರಗಳು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಬೇಕು. ಅದನ್ನು ಯಾರು ಬೇಕಾದರೂ ನೋಡಿ ಪ್ರಶ್ನಿಸುವಂತಿರಬೇಕು. ಅದು ಸಾರ್ವಜನಿಕವಾಗಿ ಲಭ್ಯವಿರದಿದ್ದರೆ ಅವರು ಅದನ್ನು ಪ್ರಶ್ನಿಸುವಂತಿಲ್ಲ’’ ಎಂದು ಹೇಳಿದರು.