Home ಕರ್ನಾಟಕ ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ:‌ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

ಜಾಹೀರಾತುಗಳಿಗೆ ಪೂರ್ವಾನುಮತಿ ಕಡ್ಡಾಯ:‌ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ

32
0

ಬೆಂಗಳೂರು: ಮಾಧ್ಯಮಗಳಲ್ಲಿ ಬಿತ್ತರಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮೇಲುಸ್ತುವಾರಿ ಸಮಿತಿ(ಎಂಸಿಎಂಸಿ)ಯಿಂದ ಪೂರ್ವಾನುಮತಿ ಕಡ್ಡಾಯ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸೂಚಿಸಿದ್ದಾರೆ

ಬುಧವಾರ ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಹಾತ್ಮಗಾಂಧಿ ಮಾಧ್ಯಮ ಕೇಂದ್ರದಲ್ಲಿ ಮುಖ್ಯ ಚುನಾವಣಾಧಿಕಾರಿ ಕಚೇರಿ ಹಾಗೂ ವಾರ್ತಾ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಲೋಕಸಭಾ ಚುನಾವಣೆ ಅಂಗವಾಗಿ ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಜಿಲ್ಲಾ ವಾರ್ತಾಧಿಕಾರಿಗಳಿಗೆ ಚುನಾವಣೆ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯದಲ್ಲಿ 2 ಮತ್ತು 3ನೆ ಹಂತದಲ್ಲಿ ಮತದಾನ ಕ್ರಮವಾಗಿ ಎಪ್ರಿಲ್ 26 ಹಾಗೂ ಮೇ 7ರಂದು ನಡೆಯಲಿದೆ. ಟಿವಿ, ಕೇಬಲ್, ಪತ್ರಿಕೆಗಳಲ್ಲಿ ಬಿತ್ತರಗೊಳ್ಳುವ ರಾಜಕೀಯ ಜಾಹೀರಾತುಗಳಿಗೆ ಎಂಸಿಎಂಸಿಯಿಂದ ಪೂರ್ವಾನುಮತಿ ಕಡ್ಡಾಯವಾಗಿದೆ. ಇಲ್ಲದಿದ್ದಲ್ಲಿ ಕಾನೂನು ಬಾಹಿರ ಮಾಧ್ಯಮಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದರು.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರಗೊಳ್ಳುವ ರಾಜಕೀಯ ಪಕ್ಷ, ವ್ಯಕ್ತಿಗಳ ಜಾಹೀರಾತುಗಳಿಗೂ ನಿಗಾ ವಹಿಸಿದ್ದು, ಇವುಗಳಿಗೆ ಚುನಾವಣಾ ಆಯೋಗದ ಅನುಮತಿ ಪಡೆದುಕೊಳ್ಳಬೇಕು. ಈ ನಿಯಮಗಳೆಲ್ಲವೂ ಚುನಾವಣಾ ಸಂದರ್ಭಕ್ಕೆ ಮಾತ್ರ ಸೀಮಿತವಾಗದೇ ವರ್ಷದುದ್ದಕ್ಕೂ ಅನ್ವಯಿಸುತ್ತದೆ. ಅಲ್ಲದೇ ಅಂಚೆ ಮತದಾನದ ವ್ಯವಸ್ಥೆಯನ್ನು ಚುನಾವಣಾ ಆಯೋಗ ಒಟ್ಟು 16 ಅಗತ್ಯ ಸೇವೆಗಳಲ್ಲಿ ತೊಡಗಿಕೊಂಡವರಿಗೆ ಕಲ್ಪಿಸಿದೆ ಎಂದು ಮೀನಾ ತಿಳಿಸಿದರು.

ಅಪರ ಮುಖ್ಯ ಚುನಾವಣಾಧಿಕಾರಿ ಕೂರ್ಮಾರಾವ್ ಮಾತನಾಡಿ, ಚುನಾವಣಾ ಕರ್ತವ್ಯದಲ್ಲಿರುವ 16 ತುರ್ತು ಸೇವೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅಂಚೆ ಮತದಾನ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತೆಯೇ ಕರ್ತವ್ಯನಿರತ ಮಾಧ್ಯಮ ಪ್ರತನಿಧಿಗಳು 12-ಡಿ ಅರ್ಜಿ ಭರ್ತಿ ಮಾಡಿ, ವಾರ್ತಾ ಇಲಾಖೆಯ ನೋಡಲ್ ಅಧಿಕಾರಿಗೆ ಸಲ್ಲಿಸಿದಲ್ಲಿ ಅವರಿಗೆ ಅಂಚೆ ಮತದಾನದ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ಚುನಾವಣಾ ಆಯೋಗದ ಐಟಿ ಮತ್ತು ಮಾಧ್ಯಮದ ವಿಶೇಷಾಧಿಕಾರಿ ಸೂರ್ಯಸೇನ್ ಮಾತನಾಡಿ, ಸಾಮಾಜಿಕ ಜಾಲತಾಣ, ಫೇಸ್‍ಬುಕ್, ಟ್ವಿಟರ್ ಗಳಲ್ಲಿ ಚುನಾವಣಾ ಜಾಹೀರಾತು ಕುರಿತು ನಿಗಾವಹಿಸಲಾಗಿದೆ. ಸುಳ್ಳು ಸುದ್ದಿ ಜನರಿಗೆ ದಿಕ್ಕು ತಪ್ಪಿಸುವ ವಿವಿಧ ಪೋಸ್ಟ್ ಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.

ರಾಜಕೀಯ ವ್ಯಕ್ತಿಗಳು ತಮ್ಮ ಅಧಿಕೃತ ಫೇಸ್‍ಬುಕ್, ಟ್ವಿಟರ್ ಖಾತೆ ಹೊರತಾಗಿ ಇತರೆಡೆ ಬಿಂಬಿಸುವ ಜಾಹೀರಾತುಗಳ ಬಗೆಗೆ ಕ್ರಮವಹಿಸಲಾಗುವುದು. ಅಭ್ಯರ್ಥಿಗಳು, ರಾಜಕೀಯ ಪಕ್ಷದವರು, ಅಧಿಕಾರಿಗಳು ಚುನಾವಣಾ ಸಂದರ್ಭದಲ್ಲಿ ನಡೆದುಕೊಳ್ಳಬಹುದಾದ ರೀತಿಯ ಬಗ್ಗೆ ಪ್ರತ್ಯೇಕ ಸೂಚನೆ ನೀಡಲಾಗಿದೆ ಎಂದು ಸೂರ್ಯಸೇನ್ ತಿಳಿಸಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್ ಮಾತನಾಡಿ, ಜಿಲ್ಲಾ ಮಟ್ಟದ ವಾರ್ತಾಧಿಕಾರಿಗಳು ಚುನಾವಣಾ ಮಾರ್ಗಸೂಚಿಗಳನ್ವಯ ಕರ್ತವ್ಯ ನಿರ್ವಹಿಸಬೇಕು. ಯಾವುದೇ ಚ್ಯುತಿ ಉಂಟಾಗದಂತೆ ಕಾರ್ಯನಿರ್ವಹಿಸಬೇಕು. ಚುನಾವಣೆಯು ರಾಷ್ಟ್ರೀಯ ಹಬ್ಬವಾಗಿದ್ದು, ಜಿಲ್ಲೆಯಲ್ಲಿನ ಮಾಧ್ಯಮ ಪ್ರತಿನಿಧಿಗಳು ಜಿಲ್ಲಾ ಮಟ್ಟದ ಮಾಹಿತಿ ಸಂವಹನವನ್ನು ಅಡಚಣೆಯಾಗದಂತೆ ಜವಾಬ್ದಾರಿಯುತವಾಗಿ ನಿರ್ವಹಿಸಬೇಕು ಎಂದರು.

ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಈಶ್ವರ್ ದೈತೋಟ, ವಾರ್ತಾ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಡೊಳ್ಳಿನ, ಸುದ್ದಿ ಮತ್ತು ಪತ್ರಿಕಾ ಶಾಖೆಯ ಉಪನಿರ್ದೇಶಕ ಬಿ.ಕೆ.ರಾಮಲಿಂಗಪ್ಪ ಹಾಗೂ ಎಲ್ಲಾ ಜಿಲ್ಲೆಯ ವಾರ್ತಾಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here