ಕೊಲಂಬೊ : ನಮ್ಮ ಕ್ರಿಕೆಟ್ ಮಂಡಳಿ ಮೇಲಿನ ಅಮಾನತು ತೆರವುಗೊಂಡ ನಂತರ ಜುಲೈನಲ್ಲಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನ(ಐಸಿಸಿ)ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗುವುದು ಎಂದು ಶ್ರೀಲಂಕಾದ ಕ್ರೀಡಾ ಸಚಿವ ಹರಿನ್ ಫೆರ್ನಾಂಡೊ ಗುರುವಾರ ತಿಳಿಸಿದ್ದಾರೆ.
ಸರಕಾರವು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಕಾರ್ಯಚಟುವಟಿಕೆಯಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂಬ ಕಾರಣಕ್ಕೆ ಐಸಿಸಿ, ಶ್ರೀಲಂಕಾ ಕ್ರಿಕೆಟ್ ಮಂಡಳಿಯನ್ನು ಕಳೆದ ವರ್ಷದ ನವೆಂಬರ್ ನಲ್ಲಿ ಅಮಾನತುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ದ್ವೀಪರಾಷ್ಟ್ರವು ಈಗ ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಅಂಡರ್-19 ವಿಶ್ವಕಪ್ ಆತಿಥ್ಯವಹಿಸುವ ಅವಕಾಶವನ್ನು ಕಳೆದುಕೊಂಡಿತ್ತು.
ಶ್ರೀಲಂಕಾವು ಜುಲೈ 19ರಿಂದ 22ರ ತನಕ ಕೊಲಂಬೊದಲ್ಲಿ ಐಸಿಸಿ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಿದೆ. ಇದು ಕ್ರಿಕೆಟ್ ಹಾಗೂ ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಶ್ರಿಲಂಕಾಕ್ಕೆ ಭಾರೀ ಉತ್ತೇಜನಕಾರಿ ಅಂಶವಾಗಲಿದೆ ಎಂದು ಪ್ರವಾಸೋದ್ಯಮ ಸಚಿವರೂ ಆಗಿರುವ ಫೆರ್ನಾಂಡೊ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.