ಹೊಸದಿಲ್ಲಿ: ಇಂದಿನಿಂದ ಹೊಸ ಕ್ರಿಮಿನಲ್ ಕಾನೂನುಗಳು ಜಾರಿಗೊಂಡಿದ್ದು, ಕೇಂದ್ರ ಗೃಹಸಚಿವ ಅಮಿತ್ ಶಾ ಅವರು 2024,ಜು.1ರಂದು ಮತ್ತು ನಂತರದ ಅಪರಾಧ ಪ್ರಕರಣಗಳಿಗೆ ನೂತನ ಕಾನೂನುಗಳು ಅನ್ವಯಿಸುತ್ತವೆ ಎಂದು ತಿಳಿಸಿದರು.
ಬ್ರಿಟಿಷ್ ಯುಗದ ಭಾರತೀಯ ದಂಡ ಸಂಹಿತೆ,1860(ಐಪಿಸಿ), ಅಪರಾಧ ಪ್ರಕ್ರಿಯಾ ಸಂಹಿತೆ,1973(ಸಿಆರ್ಪಿಸಿ) ಮತ್ತು ಭಾರತೀಯ ಸಾಕ್ಷ್ಯ ಕಾಯ್ದೆ,1872(ಐಇಎ)ಗಳ ಬದಲಾಗಿ ಅನುಕ್ರಮವಾಗಿ ಭಾರತೀಯ ನ್ಯಾಯ ಸಂಹಿತಾ(ಬಿಎನ್ಎಸ್),ಭಾರತೀಯ ನಾಗರಿಕ ಸುರಕ್ಷಾ ಸಂಹಿತಾ(ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ(ಬಿಎಸ್ಎ) ದೇಶಾದ್ಯಂತ ಜಾರಿಗೊಂಡಿದ್ದು, ಭಾರತದ ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆಗಳನ್ನು ತರಲಿವೆ.
ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮಿತ್ ಶಾ, ಬಾಕಿಯುಳಿದಿರುವ ಪ್ರಕರಣಗಳನ್ನು ಯಾವ ಕಾನೂನುಗಳಡಿ ವಿಚಾರಣೆ ನಡೆಸಲಾಗುತ್ತದೆ ಎಂಬ ಅಸ್ಪಷ್ಟತೆಯ ಕುರಿತು ಪ್ರಶ್ನೆಗೆ, ಅಪರಾಧ ನಡೆದ ದಿನಾಂಕವು ಜು.1ಕ್ಕಿಂತ ಮೊದಲಿನದಾಗಿದ್ದರೆ ಅದನ್ನು ಹಳೆಯ ಕಾನೂನುಗಳಡಿ ವಿಚಾರಣೆ ನಡೆಸಲಾಗುವುದು. ಜು.1ರಂದು ಮತ್ತು ನಂತರದ ಅಪರಾಧ ಪ್ರಕರಣಗಳು ನೂತನ ಕಾನೂನುಗಳಡಿ ವಿಚಾರಣೆಗೆ ಒಳಪಡುತ್ತವೆ ಎಂದು ಉತ್ತರಿಸಿದರು. ಎಲ್ಲ ಕಾನೂನುಗಳು ಮತ್ತು ಅವುಗಳ ತಾಂತ್ರಿಕ ನವೀಕರಣಗಳು ಅನುಷ್ಠಾನಗೊಳ್ಳಲು ಮೂರರಿಂದ ನಾಲ್ಕು ವರ್ಷಗಳು ಬೇಕಾಗಬಹುದು ಎಂದೂ ಅವರು ಹೇಳಿದರು.
‘ತಂತ್ರಜ್ಞಾನವು ಎಲ್ಲ ಪೋಲಿಸ್ ಠಾಣೆಗಳನ್ನು ತಲುಪಿಲ್ಲ, ಅದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ ಬಿಎನ್ಎಸ್ ದೇಶಾದ್ಯಂತ ಅನ್ವಯಿಸುತ್ತದೆ. ಆ.15ಕ್ಕೆ ಮುನ್ನ ಅದನ್ನು ಎಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಗೊಳಿಸಲಾಗುವುದು. ಭಾರತೀಯ ಸಾಕ್ಷ್ಯ ಅಧಿನಿಯಮಕ್ಕೆ ಸಿದ್ಧತೆ ಅಗತ್ಯವಾಗಿದೆ, ಬಿಎನ್ಎಸ್ ಮತ್ತು ಬಿಎನ್ಎಸ್ಎಸ್ಗೆ ಅಲ್ಲ’ ಎಂದು ತಿಳಿಸಿದ ಶಾ, ಸರ್ವೋಚ್ಚ ನ್ಯಾಯಾಲಯವು ಪುರುಷರ ವಿರುದ್ಧದ ಲೈಂಗಿಕ ಅಪರಾಧಗಳನ್ನು ಪ್ರಸ್ತಾವಿಸಿರುವುದರಿಂದ ಅವುಗಳನ್ನೂ ಈ ಕಾನೂನುಗಳ ವ್ಯಾಪ್ತಿಗೆ ತರುವ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಗ್ವಾಲಿಯರ್ ನಲ್ಲಿ ಇಂದು ದಾಖಲಾಗಿರುವ ಬೈಕ್ ಕಳ್ಳತನ ಪ್ರಕರಣವು ನೂತನ ಕಾನೂನಿನಡಿ ಪ್ರಪ್ರಥಮ ಎಫ್ಐಆರ್ ಆಗಿದೆ ಎಂದರು.
ಭಯೋತ್ಪಾದನೆ ಕುರಿತಂತೆ ಮಾತನಾಡಿದ ಅಮಿತ್ ಶಾ, ‘ನಾವು ಶೂನ್ಯ ಭಯೋತ್ಪಾದನೆ ನೀತಿಯನ್ನು ಹೊಂದಿದ್ದು,ಕೆಲವು ಭಯೋತ್ಪಾದಕ ಕೃತ್ಯಗಳ ಸಂಚನ್ನು ದೇಶದ ಹೊರಗೆ ರೂಪಿಸಿದ ನಿದರ್ಶನಗಳಿವೆ. ಹೀಗಾಗಿ ಬಿಎನ್ಎಸ್ನಲ್ಲಿ ಭಯೋತ್ಪಾದನೆಯನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ ’ ಎಂದು ಹೇಳಿದರು. ತಾನು ಗುಜರಾತಿನ ಗೃಹಸಚಿವನಾಗಿದ್ದಾಗ ಬಾಂಬ್ ಸ್ಫೋಟ್ ಸಂಭವಿಸಿದ್ದನ್ನು ನೆನಪಿಸಿಕೊಂಡ ಶಾ, ಆಗ ಭಯೋತ್ಪಾದನೆಯನ್ನು ವ್ಯಾಖ್ಯಾನಿಸಲಾಗಿರಲಿಲ್ಲ, ಹೀಗಾಗಿ ಎಲ್ಲ ಸಂಚುಕೋರರು ಕಾನೂನಿನ ಕುಣಿಕೆಯಿಂದ ಪಾರಾಗಿದ್ದರು ಎಂದು ತಿಳಿಸಿದರು.