ಉಡುಪಿ, ಜೂ.1: ಉಡುಪಿ ಜಿಲ್ಲಾ ಅಮೆಚೂರ್ ಅಥ್ಲೆಟಿಕ್ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಅಥ್ಲೆಟಿಕ್ ಸಂಸ್ಥೆ ಜಂಟಿ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಹಿರಿಯರ ಮತ್ತು ಯೂತ್ ಅಥ್ಲೆಟಿಕ್ ಮೀಟ್ನ್ನು ಅಜ್ಜರಕಾಡು ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಜೂ.6 ಮತ್ತು 7ರಂದು ಹಮ್ಮಿಕೊಳ್ಳಲಾಗಿದೆ.
ಉಡುಪಿಯಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉಡುಪಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹರಿಪ್ರಸಾದ್ ರೈ, ಈ ಕ್ರೀಡಾಕೂಟದಲ್ಲಿ ಜೂ.15 ರಿಂದ 18ರವರೆಗೆ ಬಿಲಾಸ್ಪುರ್ನಲ್ಲಿ ನಡೆಯುವ ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಚಾಂಪಿಯನ್ ಶಿಪ್ಗೆ ಕರ್ನಾಟಕ ರಾಜ್ಯ ತಂಡ ಮತ್ತು ಜೂ.25ರಿಂದ 28ರವರೆಗೆ ಹರಿಯಾಣದ ಪಂಚಕೂಲದಲ್ಲಿ ನಡೆಯುವ ಅಂತರ್ ರಾಜ್ಯ ಕ್ರೀಡಾಕೂಟಕ್ಕೆ ಆಯ್ಕೆ ನಡೆಯಲಿದೆ ಎಂದರು.
ಜೂ.6ರಂದು ಬೆಳಗ್ಗೆ 9.30ಕ್ಕೆ ನಡೆಯುವ ಕ್ರೀಡಾಕೂಟವನ್ನು ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿ ಸಲಿದ್ದು, ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಧ್ಯಕ್ಷತೆ ವಹಿಸಲಿರುವರು. ಕ್ರೀಡಾಕೂಟವು ಅಥ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾದ ಆಧುನಿಕ ನಿಯಮದನ್ವಯ ಈ ಕ್ರೀಡಾಕೂಟದ ತಾಂತ್ರಿಕ ವಿಭಾಗದಲ್ಲಿ ಫೋಟ್ ಫಿನಿಶಿಂಗ್ ತಂತ್ರವನ್ನು ಬಳಸಲಾಗುವುದು ಎಂದರು.
18ರ ವಯೋಮಾನದ ಒಟ್ಟು 24 ಸ್ಪರ್ಧೆಗಳು ಮತ್ತು ಹಿರಿಯರ ವಿಭಾಗದಲ್ಲಿ ಒಟ್ಟು 40 ಸ್ಪರ್ಧೆಗಳು ನಡೆಯಲಿವೆ. ಹಿರಿಯರ ಕ್ರೀಡಾಕೂಟದಲ್ಲಿ 185 ಕ್ರೀಡಾಪಟುಗಳು ಹಾಗೂ ಯುತ್ ವಿಭಾಗದಲ್ಲಿ 385 ಕ್ರೀಡಾಪಟುಗಳು ಭಾಗವಹಿ ಸಲಿದ್ದಾರೆ. ಬಹುಮಾನ ವಿತರಣಾ ಸಮಾರಂಭವು ಜೂ.7ರಂದು ಸಂಜೆ 4:30 ಗಂಟೆಗೆ ನಡೆಯಲಿದೆ.
ಕೂಟದ ವಿಶೇಷ ಆಕರ್ಷಣೆಯಾಗಿ 23 ವರ್ಷ ವಯೋಮಾನದಲ್ಲಿ 200 ಮೀಟರ್ ಓಟದಲ್ಲಿ ರಾಷ್ಟ್ರೀಯ ದಾಖಲೆ ಮಾಡಿ ರುವ ಜಿಲ್ಲೆಯ ಅಭಿನ್ ದೇವಾಡಿಗ ಹಿರಿಯರ ವಿಭಾಗದಲ್ಲಿ ಭಾಗವಹಿಸಲಿದ್ದಾರೆ. ಕ್ರೀಡಾ ಕೂಟದಲ್ಲಿ 100 ಕ್ರೀಡಾಧಿಕಾರಿಗಳು ಹಾಗೂ 50 ಜನ ಸ್ವಯಂಸೇಕರು ಕರ್ತವ್ಯದ ನಿರ್ವಹಿಸಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಥ್ಲೆಟಿಕ್ ಸಂಸ್ಥೆಯ ಕಾರ್ಯದರ್ಶಿ ಎ.ರಾಜ ವೇಲು, ಜಿಲ್ಲಾ ಕಾರ್ಯದರ್ಶಿ ದಿನೇಶ್ ಕುಮಾರ್, ಡಾ.ರಾಮಚಂದ್ರ ಪಾಟ್ಕರ್, ಬಾಬು ಶೆಟ್ಟಿ, ನಾರಾಯಣ ಪ್ರಭು, ಲಚ್ಚೇಂದ್ರ ಉಪಸ್ಥಿತರಿದ್ದರು.
