Home Uncategorized ಜೈಲಲ್ಲಿ ಸಾಯುವುದೇ ಮೇಲು: ಕೋರ್ಟ್ ನಲ್ಲಿ ಕಣ್ಣೀರಿಟ್ಟ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್

ಜೈಲಲ್ಲಿ ಸಾಯುವುದೇ ಮೇಲು: ಕೋರ್ಟ್ ನಲ್ಲಿ ಕಣ್ಣೀರಿಟ್ಟ ಜೆಟ್ ಏರ್ ವೇಸ್ ಸಂಸ್ಥಾಪಕ ನರೇಶ್ ಗೋಯಲ್

54
0

ಮುಂಬೈ: ಜೀವನದಲ್ಲಿ ಯಾವುದೇ ಭರವಸೆ ಉಳಿದಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸೆರೆವಾಸದಲ್ಲಿರುವ ಬದಲು ಜೈಲಲ್ಲಿ ಸಾಯುವುದೇ ಮೇಲು ಎಂದು ಹಣ ದುರುಪಯೋಗ ಪ್ರಕರಣ ಸಂಬಂಧ ಬಂಧನದಲ್ಲಿರುವ ಜೆಟ್ ಏರ್ ವೇಸ್ ಇಂಡಿಯಾ ಲಿಮಿಟೆಡ್ ಸಂಸ್ಥಾಪಕ ನರೇಶ್ ಗೋಯಲ್, ವಿಶೇಷ ಪಿಎಂಎಲ್ಎ ನ್ಯಾಯಾಲಯದ ಮುಂದೆ ಶನಿವಾರ ಕಣ್ಣೀರಿಟ್ಟರು.

ಈ ವೇಳೆ ಸಮಾಧಾನಿಸಿದ ನ್ಯಾಯಾಧೀಶರು, ನಿರೀಕ್ಷೆ ಕಳೆದುಕೊಳ್ಳಬೇಡಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಲು ಅಗತ್ಯ ಚಿಕಿತ್ಸೆ ನೀಡುವ ಮೂಲಕ ಸಾಧ್ಯವಾದ ಎಲ್ಲ ಆರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ನ್ಯಾಯಾಧೀಶರ ಮುಂದೆ ತಲೆಬಾಗಿ ಕೈಮುಗಿದು ಮೊರೆ ಇಟ್ಟ 74 ವರ್ಷ ವಯಸ್ಸಿನ ಗೋಯಲ್, ತಮ್ಮ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದ್ದು, ಅನಿಶ್ಚಿತವಾಗಿದೆ. ಹಾಸಿಗೆ ಹಿಡಿದ ಪತ್ನಿಯಿಂದ ದೂರವಾಗಿದ್ದೇನೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ನ್ಯಾಯಾಧೀಶ ಎಂ.ಜಿ.ದೇಶಪಾಂಡೆ, “ಅಸ್ವಸ್ಥತೆಯ ಕಾರಣದಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ವಕೀಲರಿಗೆ ಸೂಚನೆ ನೀಡಿದೆ. ಅವರ ಆರೈಕೆಗೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಕೋರ್ಟ್ ನೀಡಿದೆ” ಎಂದರು.

ಸೆಪ್ಟೆಂಬರ್ 14ರಿಂದ ಗೋಯಲ್ ಜೈಲಿನಲ್ಲಿದ್ದಾರೆ. ನರೇಶ್ ಗೋಯಲ್, ಪತ್ನಿ ಅನಿತಾ ಗೋಯಲ್ ಹಾಗೂ ನಾಲ್ಕು ಕಂಪನಿಗಳ ವಿರುದ್ಧದ ಆರೋಪಪಟ್ಟಿಯ ಪ್ರಕಾರ, ಎಸ್ ಬಿಐ ಹಾಗೂ ಪಿಎನ್ ಬಿ ಬ್ಯಾಂಕ್ ನೇತೃತ್ವದ ಬ್ಯಾಂಕ್ ಒಕ್ಕೂಟದಿಂದ ಪಡೆದ 5716.3 ಕೋಟಿ ರೂಪಾಯಿ ಸಾರ್ವಜನಿಕ ಹಣ ಜೆಐಎಲ್ ಮತ್ತು ಅದರ ಪ್ರವರ್ತಕರ ಅಧಿಸೂಚಿತ ಅಪರಾಧಕ್ಕೆ ಸಂಬಂಧಿಸಿದ್ದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

LEAVE A REPLY

Please enter your comment!
Please enter your name here