Home ಕರ್ನಾಟಕ ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಜಯ

ಟಿ20 ವಿಶ್ವಕಪ್: ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಜಯ

18
0

ಹೊಸದಿಲ್ಲಿ: ಕ್ವಿಂಟನ್ ಡಿಕಾಕ್ ಅವರ ಅಮೋಘ ಅರ್ಧ ಶತಕ ಮತ್ತು ಬೌಲರ್ ಗಳ ಸಂಘಟಿತ ಪ್ರಯತ್ನದ ಫಲವಾಗಿ ಟಿ20 ವಿಶ್ವಕಪ್ ಪಂದ್ಯಾವಳಿಯ ಸೂಪರ್8 ಹಂತದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಏಳು ರನ್ ಗಳ ಅಂತರದಿಂದ ಸೋಲಿಸಿತು.

ಸೆಂಟ್ ಲೂಯಿಸ್ ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಇಂಗ್ಲೆಂಡ್ 163 ರನ್ ಗಳಿಗೆ ನಿಯಂತ್ರಿಸಿದರೂ, ದಕ್ಷಿಣ ಆಫ್ರಿಕಾ ಬೌಲರ್ ಗಳು ಪಂದ್ಯವನ್ನು ಗೆದ್ದುಕೊಟ್ಟರು. ಇಂಗ್ಲೆಂಡ್ ಪರ ಹ್ಯಾರಿ ಬ್ರೂಕ್ (53) ಮತ್ತು ಲಿಯಾಮ್ ಲಿವಿಂಗ್ ಸ್ಟೋನ್ (33) ಪ್ರತಿರೋಧ ತೋರಿದರು. ಆದರೆ 5 ರಿಂದ 12ನೇ ಓವರ್ ವರೆಗೆ ಯಾವುದೇ ಬೌಂಡರಿಯನ್ನು ಗಳಿಸಲು ವಿಫಲವಾದದ್ದು ಇಂಗ್ಲೆಂಡ್ ಪಾಲಿಗೆ ದುಬಾರಿ ಎನಿಸಿತು.

ಬ್ರೂಕ್ ಮತ್ತು ಲಿವಿಂಗ್ ಸ್ಟೋನ್ ಅವರು ಕೇವಲ 42 ಎಸೆತಗಳಲ್ಲಿ 78 ರನ್ ಗಳ ಅಮೋಘ ಜತೆಯಾಟದ ಮೂಲಕ ಪಂದ್ಯದಲ್ಲಿ ಮತ್ತೆ ಹಿಡಿತ ಸ್ಥಾಪಿಸಿದರು. ಆದರೆ ಕೊನೆಗೂ ದಕ್ಷಿಣ ಆಫ್ರಿಕಾ ತಂಡ ಟೂರ್ನಿಯಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಲು ಸಾಧ್ಯವಾಯಿತು. ಕೊನೆಯ ನಾಲ್ಕು ಓವರ್ ಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 46 ರನ್ ಗಳು ಬೇಕಿದ್ದಾಗ, 17ನೇ ಓವರ್ ನಲ್ಲಿ ಒಟ್ನೇಲ್ ಬರ್ಟ್ ಮನ್ ಅವರ ಫುಲ್ ಟಾಸ್ ಗಳು ನಿರೀಕ್ಷೆ ಮೂಡಿಸಿದವು.

ಈ ಹಂತದಲ್ಲಿ ಕಗಿಸೊ ರಬಡ (2/32) ಮತ್ತು ಮ್ಯಾಕ್ರೊ ಜಾನ್ಸನ್ ಅಂತಿಮ ಓವರ್ ಗಳಲ್ಲಿ ನಿಯಂತ್ರಣ ಸಾಧಿಸಿದರು. ಆನ್ರಿಚ್ ನೋರ್ಜೆ (1/35) ಅಂತಿಮ ಓವರ್ ನಲ್ಲಿ ಬ್ರೂಕ್ಸ್ ವಿಕೆಟ್ ಕಬಳಿಸುವ ಮೂಲಕ ದಕ್ಷಿಣ ಆಫ್ರಿಕಾ ಜಯವನ್ನು ಖಾತರಿಪಡಿಸಿದರು. ಇದಕ್ಕೂ ಮುನ್ನ ಇಂಗ್ಲೆಂಡ್ ಬೌಲರ್ ಗಳ ಉತ್ತಮ ಪ್ರದರ್ಶನದ ಹೊರತಾಗಿಯೂ ಕ್ವಿಂಟನ್ ಡಿಕಾಕ್ (65) ಅವರ ಅಮೋಘ ಅರ್ಧ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಗೌರವಾರ್ಹ ಮೊತ್ತ ಕಲೆ ಹಾಕಿತ್ತು.

LEAVE A REPLY

Please enter your comment!
Please enter your name here