ಗಯಾನ : ಟಿ20 ವಿಶ್ವಕಪ್ ಕ್ರಿಕೆಟ್ ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 68 ರನ್ ಗಳ ಭರ್ಜರಿ ಜಯ ಗಳಿಸಿದ ಭಾರತ ತಂಡ ಫೈನಲ್ ಗೆ ಲಗ್ಗೆ ಇಟ್ಟಿದೆ.
ಆ ಮೂಲಕ 2022ರ ಟಿ20 ವಿಶ್ವಕಪ್ ನಲ್ಲಿ ಇಂಗ್ಲೆಂಡ್ ವಿರುದ್ಧದ ಸೋಲಿನ ಸೇಡು ತೀರಿಸಿಕೊಂಡಿತು.
ಭಾರತ ತಂಡ ನೀಡಿದ 172 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡವು ಭಾರತದ ಬಿಗಿ ಬೌಲಿಂಗ್ ದಾಳಿಗೆ ನಲುಗಿ 16.4 ಓವರ್ ಗಳಲ್ಲಿ 103 ರನ್ ಗಳಿಗೆ ಆಲೌಟ್ ಆಯಿತು.
ಆರಂಭದ ನಾಲ್ಕು ಓವರ್‌ಗಳಲ್ಲಿ ಉತ್ತಮ ಪ್ರತಿರೋಧ ತೋರಿದರೂ ಇಂಗ್ಲೆಂಡ್ ಕಡೆಗಿನ ಪಂದ್ಯ ನಾಟಕೀಯ ಕುಸಿತ ಕಂಡಿತು.
ಇಂಗ್ಲೆಂಡ್ ಪರ ಬ್ರೂಕ್ 25, ಜೋಸ್ ಬಟ್ಲರ್ 25 ಹಾಗೂ ಜೋಪ್ರಾ ಆರ್ಚರ್ 21 ರನ್ ಗಳಿಸಿದರು. ಭಾರತದ ಬೌಲರ್‌ಗಳ ಮುಂದೆ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಸಹಿತ ಪ್ರಮುಖ ಬ್ಯಾಟರ್‌ಗಳು ಮತ್ತು ಆಲ್‌ರೌಂಡರ್‌ಗಳು ವಿಫಲರಾದರು.
ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ತಲಾ 3 ವಿಕೆಟ್, ಬುಮ್ರಾ 2 ವಿಕೆಟ್ ಕಿತ್ತು ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.
ಜೂನ್ 29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.