ವಾಶಿಂಗ್ಟನ್ :ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಆಯ್ಕೆಗಾಗಿ ನಡೆಯುತ್ತಿರುವ ಆಂತರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಮೆಯಿನೆ ಹಾಗೂ ಕೊಲೆರಾಡೊ ರಾಜ್ಯಗಳು ಅನರ್ಹಗೊಳಿಸಿ ರುವುದನ್ನು ಅವರ ಎದುರಾಳಿ ಅಭ್ಯರ್ಥಿಯಾದ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಬಲವಾಗಿ ಖಂಡಿಸಿದ್ದಾರೆ. ಟ್ರಂಪ್ ಅವರಿಗೆ ಸ್ಪರ್ಧಿಸಲು ಅವಕಾಶ ದೊರೆಯದೆ ಇದ್ದಲ್ಲಿ ತಾನು ಕೂಡಾ ಆ ರಾಜ್ಯಗಳಲ್ಲಿ ಸ್ಪರ್ಧಿಸುವುದಿಲ್ಲವೆಂದು ಅವರು ಹೇಳಿದ್ದಾರೆ. ಅಲ್ಲದೆ ಉಳಿದ ರಿಪಬ್ಲಿಕನ್ ಅಭ್ಯರ್ಥಿಗಳು ಕೂಡಾ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಕರೆ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಪರಾಭವಗೊಂಡ ಬಳಿ 2021ರಲ್ಲಿ ಅವರ ಬೆಂಬಲಿಗರು ಅಮೆರಿಕದ ಸಂಸತ್ ಭವನ ಕ್ಯಾಪಿಟಲ್ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಟ್ರಂಪ್ ಅವರ ಪಾತ್ರವಿದೆಯೆಂದು ಆರೋಪಿಸಿ ಮೆಯಿನೆ ಹಾಗೂ ಕೊಲೆರಾಡೊ ರಾಜ್ಯಗಳು ರಿಪಬ್ಲಿಕನ್ ಆಂತರಿಕ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದನ್ನು ನಿಷೇಧಿಸಿದ್ದವು.
ವಿವೇಕ್ ರಾಮಸ್ವಾಮಿ ಅವರು ಸೋಮವಾರ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶ ನದಲ್ಲಿ ಮಾತನಾಡುತ್ತಾ, ‘‘ ಒಂದು ವೇಳೆ ಈ ಎರಡು ರಾಜ್ಯಗಳು ಅಸಂವಿಧಾನಿಕವಾಗಿ ವರ್ತಿಸಿದಲ್ಲಿ ಈ ರೀತಿಯ ಚುನಾವಣಾ ಹಸ್ತಕ್ಷೇಪವನ್ನು ನಿಲ್ಲಿಸಲು ರಿಪಬ್ಲಿಕನ್ ಅಭ್ಯರ್ಥಿಗಳಿಗೆ ನಿಜಕ್ಕೂ ಸಾಧ್ಯವಿದೆ’’ ಎಂದು ಹೇಳಿದ್ದಾರೆ. ‘‘ಟ್ರಂಪ್ ಅವರಿಗೆ ಸ್ಪರ್ಧೆಗೆ ಅವಕಾಶ ದೊರೆಯದೇ ಇದ್ದಲ್ಲಿ ನಾನು ಕೂಡಾ ಬ್ಯಾಲಟ್ನಿಂದ ನನ್ನ ಹೆಸರನ್ನು ತೆಗೆಯುತ್ತೇನೆ. ಇತರ ರಿಪಬ್ಲಿಕನ್ ಅಭ್ಯರ್ಥಿಗಳು ಕೂಡಾ ಅದನ್ನು ಅನುಸರಿಸಲಿ’’ ಎಂದವರು ಹೇಳಿದ್ದಾರೆ.
ಕಣದಲ್ಲಿರುವ ಉಳಿದ ಅಭ್ಯರ್ಥಿಗಳಾದ ರಾನ್ ಡೆ ಸ್ಯಾಂಟಿಸ್, ನಿಕ್ಕಿ ಹ್ಯಾಲೆ ಹಾಗೂ ಕ್ರಿಸ್ ಕ್ರಿಸ್ಟಿ ಕೂಡಾ ಇದೇ ದಾರಿಯನ್ನು ಅನುಸರಿಸಬೇಕಾಗಿದೆ. ಆದರೆ ಅವರು ಈ ವಿಷಯದಲ್ಲಿ ಬದಿಗೆ ಸರಿದಿದ್ದಾರೆ ಹಾಗೂ ಗಾಢಮೌನ ತಾಳಿದ್ದಾರೆಂದು ಎಂದು ರಾಮಸ್ವಾಮಿ ಟೀಕಿಸಿದರು.