ಟೆಕ್ ಬಿಲಿಯನೇರ್ ಆಗಿರುವ ಸ್ಪೇಸ್ ಎಕ್ಸ್ ಸಿಇಓ ಎಲಾನ್ ಮಸ್ಕ್ (Elon Musk) ಅವರು ಟ್ವಿಟರ್ (Twitter) ಅನ್ನು ಖರೀದಿಸಿದ ನಂತರ ಅನೇಕ ವಿವಾದಗಳ ಹುಟ್ಟಿಕೊಂಡಿರುವುದು ಎಲ್ಲರಿಗೆ ತಿಳಿದಿರುವ ವಿಚಾರವಾಗಿದೆ. ಇದೀಗ ಮಸ್ಕ್ ಅವರು ನೆಟ್ಟಿಗರ ಮುಂದೆ ನಿರ್ಣಾಯಕ ಪ್ರಶ್ನೆಯೊಂದನ್ನು ಮುಂದಿಟ್ಟಿದ್ದು, ಇದು ಅವರ ಟ್ವಿಟರ್ನಲ್ಲಿನ ಅವರ ಸ್ಥಾನಕ್ಕೆ ಸಂಬಂಧಿಸಿದ್ದಾಗಿದೆ. “ನಾನು ಟ್ವಿಟರ್‌ನ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಯಬೇಕೇ? ನಾನು ಈ ಸಮೀಕ್ಷೆಯ ಫಲಿತಾಂಶಗಳಿಗೆ ಬದ್ಧನಾಗಿರುತ್ತೇನೆ” ಎಂದು ಮಸ್ಕ್ ಟ್ವೀಟ್ ಮಾಡಿದ್ದಾರೆ. ಇಂದು ಬೆಳ್ಳಂಬೆಳಗ್ಗೆ ಎಲಾನ್ ಮಸ್ಕ್ ಮಾಡಿದ ‘ಹೌದು’ ‘ಬೇಡ’ ಆಯ್ಕೆಗಳ ಟ್ವೀಟ್ಗೆ ಭರ್ಜರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.
ಟ್ವಿಟರ್ ಸಿಇಓ ಸ್ಥಾನದಿಂದ ಕೆಳಗಿಳಿಯಬೇಕೇ? ಎಂದು ಬೆಳಗ್ಗೆ 4.50ಕ್ಕೆ ಮಸ್ಕ್ ಅವರ ಕೇಳಿದ ಪ್ರಶ್ನೆಗೆ ಈವರೆಗೆ 68,63041 ಮತ ಚಲಾವಣೆಯಾಗಿದ್ದು, ಈ ಪೈಕಿ ಕೆಲವರು ಸಿಇಓ ಸ್ಥಾನದಿಂದ ಕೆಳಗಿಳಿಯುವುದು ಬೇಡ ಎಂದರೆ ಇನ್ನೂ ಕೆಲವರು ಸ್ಥಾನದಿಂದ ಕೆಳಗಿಳಿಯುವಂತೆ ಹೇಳಿದ್ದಾರೆ. ಅಲ್ಲದೆ, 1.14 ಲಕ್ಷಕ್ಕೂ ಅಧಿಕ ರೀಟ್ವೀಟ್ಗಳು ಆಗಿದ್ದು, 89 ಸಾವಿರಕ್ಕೂ ಅಧಿಕ ಕಾಮೆಂಟ್ಗಳು ಬಂದಿವೆ. 1.16 ಲಕ್ಷಕ್ಕೂ ಹೆಚ್ಚು ಲೈಕ್ಗಳು ಬಂದಿವೆ.
ಎಲಾನ್ ಮಸ್ಕ್ ಅವರು ನೆಟ್ಟಿಗರಿಗೆ ಕೇಳಿದ ನಿರ್ಣಾಯಕ ಪ್ರಶ್ನೆಗೆ ಉತ್ತರಿಸಲು ಡೆಡ್ಲೈನ್ ಕೂಡ ಇದ್ದು, ಇನ್ನು ಕೇವಲ 9 ಗಂಟೆಗಳಷ್ಟೇ ಓಟಿಂಗ್ ಅವಕಾಶ ಇರಲಿದೆ. ಕೇವಲ ಮೂರು ಗಂಟೆಗಳಲ್ಲಿ 68 ಲಕ್ಷಕ್ಕೂ ಅಧಿಕ ಮತಗಳು ಚಲಾವಣೆಯಾಗಿದ್ದು, ಮತಗಳ ಸಂಖ್ಯೆಯಲ್ಲಿ ಹೆಚ್ಚುತ್ತಲೇ ಇದೆ.
ಪ್ರತಿಸ್ಪರ್ಧಿಗಳನ್ನು ಉತ್ತೇಜಿಸುವ ಮತ್ತು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಮಾಸ್ಟೋಡಾನ್‌ನಂತಹ ಸೈಟ್‌ಗಳಿಗೆ ಲಿಂಕ್‌ಗಳನ್ನು ಹೊಂದಿರುವ ಖಾತೆಗಳನ್ನು ತೆಗೆದುಹಾಕಲಾಗುವುದು ಎಂದು ಕಂಪನಿ ಭಾನುವಾರ ತಿಳಿಸಿದೆ. ಮುಂದೆ ತಾನು ಎಲ್ಲಾ ಪ್ರಮುಖ ನೀತಿ ಬದಲಾವಣೆಗಳ ಬಗ್ಗೆ ಮತಗಳನ್ನು ನಡೆಸುತ್ತೇನೆ ಎಂದು ಮಸ್ಕ್ ಹೇಳಿದರು. ಇದರ ಬೆನ್ನಲ್ಲೆ ಮಸ್ಕ್ ಅವರು ಈ ಸಮೀಕ್ಷೆಯನ್ನು ನಡೆಸುತ್ತಿದ್ದಾರೆ.
ಇದನ್ನೂ ಓದಿ: Electric Bus: 921 ಎಲೆಕ್ಟ್ರಿಕ್ ಬಸ್ ಖರೀದಿಗೆ ಟಾಟಾ ಮೋಟರ್ಸ್ ಅಂಗಸಂಸ್ಥೆ ಟಿಎಂಎಲ್ ಜತೆ ಬಿಎಂಟಿಸಿ ಒಪ್ಪಂದ
ಅಕ್ಟೋಬರ್‌ನಲ್ಲಿ ಟ್ವಿಟ್ಟರ್ ಅನ್ನು ಖರೀದಿಸಿದ್ದ ಎಲೋನ್ ಮಸ್ಕ್, ಸಾಮಾಜಿಕ ಮಾಧ್ಯಮ ಸೈಟ್‌ನಲ್ಲಿ ಹಿಂದೆ ನಿಷೇಧಿತ ಬಳಕೆದಾರರನ್ನು ಮರಳಿ ಅನುಮತಿಸುವುದು ಸೇರಿದಂತೆ ಸಾಮೂಹಿಕ ವಜಾಗಳು ಮತ್ತು ಇತ್ತೀಚಿನ ನೀತಿ ಬದಲಾವಣೆಗಳಿಗೆ ಸಂಬಂಧಿಸಿದಂತೆ ಮೊದಲ ದಿನದಿಂದ ಟೀಕೆಗೆ ಒಳಗಾಗಿದ್ದಾರೆ. ವಾಷಿಂಗ್ಟನ್ ಪೋಸ್ಟ್, CNN, ನ್ಯೂಯಾರ್ಕ್ ಟೈಮ್ಸ್ ಮತ್ತು ಇತರ ಪ್ರಮುಖ ಪತ್ರಕರ್ತರು ಸೇರಿದಂತೆ ಬಳಕೆದಾರರ ಖಾತೆಗಳನ್ನು ಅಮಾನತುಗೊಳಿಸಿದ್ದಕ್ಕಾಗಿ ಕಳೆದ ವಾರದಲ್ಲಿ ಅವರು ಹೆಚ್ಚು ಟೀಕೆಗಳನ್ನು ಎದುರಿಸುತ್ತಿದ್ದರು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ