ಮಣಿಪಾಲ: ಮಣಿಪಾಲ ಮಾಹೆಯ ಪರಮಾಣು ಹಾಗೂ ಮಾಲಿಕ್ಯೂಲರ್ ಫಿಸಿಕ್ಸ್ ವಿಭಾಗದ ಮುಖ್ಯಸ್ಥ, ಎಫ್‌ಆರ್‌ಸಿಎಸ್, ಎಫ್‌ಐಸಿಎಸ್, ಡಾ.ಸಜನ್ ಡೇನಿಯಲ್ ಜೋರ್ಜ್ ಅವರು ಬ್ರಿಟನ್‌ನ ಪ್ರತಿಷ್ಠಿತ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್‌ನ ಫೆಲೋಶಿಪ್‌ಗೆ ಆಯ್ಕೆಯಾಗಿದ್ದಾರೆ. ಭೌತಶಾಸ್ತ್ರ ವಿಭಾಗಕ್ಕೆ ಅವರು ಸಲ್ಲಿಸಿದ ಮಹತ್ತರ ಸೇವೆಗೆ ಸಲ್ಲಿಸಿದ ಗೌರವ ಇದಾಗಿದೆ.
ಈಗಾಗಲೇ ಬ್ರಿಟನ್ ರಾಯಲ್ ಸೊಸೈಟಿ ಆಫ್ ಕೆಮಿಸ್ಟ್ರಿಯ ಫೆಲೋಶಿಪ್ ಪಡೆದಿರುವ ಡಾ.ಜೋರ್ಜ್, ತಮ್ಮ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿಯನ್ನು ಸೇರಿಸಿಕೊಂಡರು. ಭೌತಶಾಸ್ತ್ರ ಕ್ಷೇತ್ರದಲ್ಲಿ ಸಿಗುವ ಅತ್ಯುನ್ನತ ಗೌರವ ಐಒಪಿಯ ಫೆಲೋಶಿಪ್ ಆಗಿದೆ.
ತಾನು ಆಯ್ದುಕೊಂಡ ಕ್ಷೇತ್ರದಲ್ಲಿ ಮಾಡಿದ ವಿಶಿಷ್ಚ ಸಾಧನೆ, ವೃತ್ತಿಪರ ಅನುಭವಕ್ಕೆ ಸಿಗುವ ಶ್ರೇಷ್ಠ ಗೌರವ ಐಒಪಿ ಫೆಲೋಶಿಪ್‌ಗೆ ಆಯ್ಕೆಯಾಗುವುದಾಗಿದೆ. 149 ವರ್ಷಗಳ ಹಿಂದೆ ಸ್ಥಾಪನೆಗೊಂಡ ದಿ ಇನ್‌ಸ್ಟಿಟ್ಯೂಟ್ ಆಫ್ ಫಿಸಿಕ್ಸ್, ವಿಜ್ಞಾನ ಸಮುದಾಯ ಗುರುತಿಸುವ ಸಾಧಕರನ್ನು ಫೆಲೋಶಿಪ್ ಮೂಲಕ ಗೌರವಿಸುತ್ತಾ ಬಂದಿದೆ.
ಇದು ಮಾಹೆಗೆ ಹೆಮ್ಮೆಯ ವಿಷಯವಾಗಿದೆ. ಭೌತಶಾಸ್ತ್ರ ಕ್ಷೇತ್ರದಲ್ಲಿ ಶ್ರೇಷ್ಠ ಸಾಧನೆಗಾಗಿ ಡಾ.ಜೋರ್ಜ್ ಅವರಿಗೆ ಈ ಗೌರವ ಸಿಕ್ಕಿರುವುದಕ್ಕೆ ನಮಗೆ ಸಂತೋಷ ಉಂಟುಮಾಡಿದೆ ಎಂದು ಮಾಹೆ ಕುಲಪತಿ ಲೆ.ಜ.ಡಾ.ಎಂ.ಡಿ. ವೆಂಕಟೇಶ್ ತಿಳಿಸಿದ್ದಾರೆ.
ಭೌತಶಾಸ್ತ್ರ ಕ್ಷೇತ್ರದಲ್ಲಿ ಡಾ.ಜೋರ್ಜ್ ಅವರ ಬೆಳವಣಿಗೆ ಹಾಗೂ ಅವರ ಸಾಧನೆ ನಮ್ಮ ಯುವ ವಿದ್ಯಾರ್ಥಿಗಳಿಗೆ, ಉದಯೋನ್ಮುಖ ವಿಜ್ಞಾನಿಗಳಿಗೆ ಸ್ಪೂರ್ತಿಯ ಸೆಲೆಯಾಗಿದೆ. ವೈಜ್ಞಾನಿಕ ಜ್ಞಾನಕ್ಕೆ ಅವರ ಬದ್ಧತೆ, ಅಕಾಡೆಮಿ ವಲಯದಲ್ಲಿ ಅವರು ನೀಡುತ್ತಿರುವ ಸೇವೆಯೂ ಅಮೂಲ್ಯವಾದುದು. ಇಂಥ ವಿದ್ವಾಂಸರೊಬ್ಬರು ಮಾಹೆಯಲ್ಲಿರುವುದೇ ನಮಗೆ ಹೆಮ್ಮೆ ಎನಿಸಿದೆ ಎಂದು ಅವರ ಹೇಳಿದರು.