ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಟಿಪ್ಪಣಿ ಆಧರಿಸಿ ಕೈಗೊಳ್ಳಲಾಗಿದ್ದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಬೆಂಗಳೂರು: ಬೆಂಗಳೂರು ನಗರ ಅಭಿವೃದ್ಧಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಟಿಪ್ಪಣಿ ಆಧರಿಸಿ ಕೈಗೊಳ್ಳಲಾಗಿದ್ದ ಬಿಬಿಎಂಪಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ವರ್ಗಾವಣೆಗೆ ತಡೆ ಕೋರಿ ಹೆಬ್ಬಾಳ ವಿಭಾಗದ ಹಿರಿಯ ಆರೋಗ್ಯ ನಿರೀಕ್ಷಕಿ ಅನೀಸ್ ಫಾತಿಮಾ ಸೇರಿದಂತೆ ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿರಿಯ-ಕಿರಿಯ ಆರೋಗ್ಯ ಪರಿವೀಕ್ಷಕರು, ಎಸ್‌ಡಿಎ, ಎಫ್‌ಡಿಎ, ಸಹಾಯಕ ಇಂಜಿನಿಯರ್ ಹುದ್ದೆಯ 17 ಅಧಿಕಾರಿಗಳು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರ ಏಕಸದಸ್ಯ ಪೀಠ, ವರ್ಗಾವಣೆಗೆ ತಡೆ ನೀಡಿದೆ.
ಇದನ್ನು ಓದಿ: ಬಿಬಿಎಂಪಿ ಕಚೇರಿಯಲ್ಲಿ ಅಗ್ನಿ ಅವಘಡ: ಗಾಯಗೊಂಡಿದ್ದ ಮುಖ್ಯ ಇಂಜಿನಿಯರ್ ಶಿವಕುಮಾರ್ ಸಾವು
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಎನ್ ಎಸ್ ಸಂಜಯ್ ಗೌಡ ಅವರು, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಗಸ್ಟ್ 10ರ ಟಿಪ್ಪಣಿ ಆಧರಿಸಿ ಯಾವುದೇ ವರ್ಗಾವಣೆ ಅಥವಾ ನಿಯೋಜನೆ ಕೈಗೊಳ್ಳುವಂತಿಲ್ಲ ಎಂದು ತಡೆಯಾಜ್ಞೆ ನೀಡಿ, ಎಲ್ಲಾ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ವಿ ಶ್ರೀನಿವಾಸ್ ಅವರು, ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಟಿಪ್ಪಣಿ ಹೊರಡಿಸಿರುವುದು ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತರ ಆಡಳಿತಾತ್ಮಕ ಅಧಿಕಾರದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಇದೊಂದು ರಾಜಕೀಯ ಒತ್ತಡದ ಕ್ರಮ. ಅಲ್ಲದೇ, ಇದು ವೃಂದ ಮತ್ತು ನೇಮಕಾತಿಗಳಿಗೆ ವಿರುದ್ಧವಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿಯ ಆಗಸ್ಟ್ 10ರ ಟಿಪ್ಪಣಿಗೆ ಈಗಾಗಲೇ ಇನ್ನೊಂದು ಅರ್ಜಿ ಸಂಬಂಧ ಬೇರೊಂದು ಪೀಠ ತಡೆ ನೀಡಿದೆ. ಹೀಗಿದ್ದರೂ, ಒಂದೇ ದಿನಾಂಕದಂದು ಎರಡು ಟಿಪ್ಪಣಿಗಳನ್ನು ಹೊರಡಿಸಲಾಗಿದೆ. ಹೀಗಾಗಿ ಅಧಿಕಾರಿಗಳ ವರ್ಗಾವಣೆ ಮತ್ತು ನಿಯೋಜನೆಗೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಆಗಸ್ಟ್ 10ರಂದು ಹೊರಡಿಸಿರುವ ಟಿಪ್ಪಣಿ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.