ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ಒಂದು ದುಃಖಕರ ಘಟನೆ ದೇಶದಾದ್ಯಂತ ಡಿಜಿಟಲ್ ಗೀಳಿನ (ಅಡಿಕ್ಷನ್) ಬಗ್ಗೆ ಗಂಭೀರ ಚರ್ಚೆಗೆ ಕಾರಣವಾಯಿತು. 12, 14 ಮತ್ತು 16 ವರ್ಷದ ಮೂವರು ಸಹೋದರಿಯರು ತಮ್ಮ ಮನೆಯಿದ್ದ ಕಟ್ಟಡದ ಮೇಲ್ಮಹಡಿಯಿಂದ ಹಾರಿ ಪ್ರಾಣ ಕಳೆದುಕೊಂಡರು. ಪ್ರಾಥಮಿಕ ತನಿಖೆಯಲ್ಲಿ ಅವರು ಮೊಬೈಲ್ ಫೋನ್, ಆನ್ಲೈನ್ ಆಟಗಳು ಮತ್ತು ಕೊರಿಯನ್ ಡಿಜಿಟಲ್ ಕ್ರೀಡೆಗಳ ಚಟ ಹತ್ತಿಸಿಕೊಂಡಿದ್ದರು ಎಂಬು ಆಘಾತಕಾರಿ ಮಾಹಿತಿ ಹೊರಬಂದಿತು.
ವರದಿಗಳ ಪ್ರಕಾರ ಆ ಮಕ್ಕಳ ಪ್ರತಿದಿನ ಬಹಳಷ್ಟು ಸಮಯ ಮೊಬೈಲ್ ಫೋನಿನ ಬಳಕೆಯಲ್ಲಿಯೇ ಕಳೆಯುತ್ತಿತ್ತು. ಸಂಗೀತ, ಕಾರ್ಟೂನ್, ಆನ್ಲೈನ್ ಗೇಮ್ಗಳು, ಸೋಷಿಯಲ್ ಮೀಡಿಯಾ ಇವೇ ಅವರ ಜಗತ್ತಾಗಿ ಹೋಗಿತ್ತು. ಮನೆಯವರು ಮೊಬೈಲ್ ಫೋನಿನ ಬಳಕೆಗೆ ಮಿತಿ ಹಾಕಲು ಪ್ರಯತ್ನಿಸಿದಾಗ ಅವರು ಭಾವನಾತ್ಮಕವಾಗಿ ನಲುಗಿಹೋದರು ಎಂದು ಹೇಳಲಾಗಿದೆ. ಇದು ಅತಿಯಾಗಿ ಡಿಜಿಟಲ್ ಸಾಧನಗಳ ಬಳಕೆ ಮಕ್ಕಳ ಮನಸ್ಸಿನ ಮೇಲೆ ಎಷ್ಟು ದುಷ್ಪರಿಣಾಮ ಬೀರುತ್ತದೆ ಎಂಬುದಕ್ಕೆ ಜ್ವಲಂತ ಉದಾಹರಣೆಯಾಗಿದೆ. ಪತ್ರಿಕಾ ವರದಿಗಳ ಪ್ರಕಾರ ನಮ್ಮ ದೇಶದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಪದವಿ ಓದುತ್ತಿರುವ ವಿದ್ಯಾರ್ಥಿಗಳು ಪ್ರತಿದಿನ ಕನಿಷ್ಠ ಎರಡು ಗಂಟೆಗಳಿಂದ ಆರು ಗಂಟೆಗಳ ತನಕ ಮೊಬೈಲ್ ಫೋನನ್ನು ಬಳಸುತ್ತಾರೆ.
ಡಿಜಿಟಲ್ ಗೀಳು ಎಂದರೇನು?
ಡಿಜಿಟಲ್ ಗೀಳು ಎಂದರೆ ಮೊಬೈಲ್, ಇಂಟರ್ನೆಟ್, ಆಟಗಳು ಅಥವಾ ಸೋಷಿಯಲ್ ಮೀಡಿಯಾವನ್ನು ಅತಿಯಾಗಿ ಬಳಸುವುದು. ಇದು ಸಾಮಾನ್ಯ ಮನರಂಜನೆ ಅಲ್ಲ – ದಿನನಿತ್ಯದ ಜೀವನ, ಓದು, ನಿದ್ರೆ, ಆರೋಗ್ಯ ಮತ್ತು ಸಂಬಂಧಗಳಿಗೆ ಹಾನಿಯಾಗುವ ಮಟ್ಟಿಗೆ ಬಳಕೆ ಹೆಚ್ಚಾದಾಗ ಅದನ್ನು ಗೀಳು ಎಂದು ಕರೆಯಬಹುದು. ಗೀಳಿಗೆ ಒಳಗಾದವರು “ಇನ್ನೂ ಸ್ವಲ್ಪ ಸಮಯ ಮಾತ್ರ”ಎಂದುಕೊಂಡೇ ಗಂಟೆಗಳ ಕಾಲ ಆನ್ಲೈನ್ನಲ್ಲಿ ಕಳೆಯಬಹುದು. ಮೊಬೈಲ್ ಫೋನ್ ಇಲ್ಲದೆ ಇರಲು ಕಷ್ಟವಾಗುತ್ತದೆ. ಓದು, ಕೆಲಸ, ಮನೆಯವರ, ಸ್ನೇಹಿತರ ಜೊತೆಗಿನ ಒಡನಾಟ ಎಲ್ಲವೂ ಕಡಿಮೆಯಾಗುತ್ತದೆ.
ಡಿಜಿಟಲ್ ಗೀಳು ಇದು ಒಂದೇ ದಿನದಲ್ಲಿ ಆಗುವುದಿಲ್ಲ. ನಿಧಾನವಾಗಿ ಬೆಳೆಯುತ್ತದೆ. ಇಂದು ಅನೇಕ ಆಪ್ಗಳನ್ನು ಮತ್ತು ಗೇಮ್ಸುಗಳನ್ನು ಬಳಕೆದಾರರು ಅವುಗಳಲ್ಲಿ ಹೆಚ್ಚು ಹೊತ್ತು ತೊಡಗಿಸಿಕೊಳ್ಳುವಂತೆ ರೂಪಿಸಲಾಗುತ್ತವೆ. ಬಹುಮಾನಗಳು, ಲೆವೆಲ್ಗಳು, ಲೈಕ್ಗಳು, ಕಾಮೆಂಟ್ಗಳು — ಇವು ಮೆದುಳಿಗೆ ಸಂತೋಷದ ಸಂಕೇತಗಳನ್ನು ಕೊಡುತ್ತವೆ. ಹೀಗೆ ಕ್ರಮೇಣ ತೊಡಗಿಕೊಳ್ಳುವಿಕೆಯಿಂದ ಗೀಳು ಬೆಳೆಯುತ್ತದೆ.
ಒತ್ತಡ, ಏಕಾಂತ, ಬೇಸರ ಅಥವಾ ದುಃಖ ಇದ್ದಾಗ ಮಕ್ಕಳು ಮತ್ತು ಯುವಕರು ಡಿಜಿಟಲ್ ಲೋಕದಲ್ಲಿ ತನ್ಮಯರಾಗುತ್ತಾರೆ. ಅಲ್ಲಿ ಅವರಿಗೆ ತಾತ್ಕಾಲಿಕ ಸಂತೋಷ ಸಿಗುತ್ತದೆ. ಅದೇ ಅವರನ್ನು ಗೀಳಿನ ಜಾಲಕ್ಕೆ ನೂಕುತ್ತದೆ. ಆನ್ಲೈನ್ ಸ್ನೇಹಿತರು, ಫಾಲೋವರ್ಸ್, ಗೇಮ್ ತಂಡಗಳು — ಇವು “ನಾನು ಯಾರಿಗಾದರೂ ಮುಖ್ಯ”ಎಂಬ ಭಾವನೆ ಕೊಡುತ್ತವೆ. ಮನೆಯಲ್ಲೂ, ಶಾಲೆಯಲ್ಲೂ ಸ್ಪಷ್ಟ ನಿಯಮಗಳಿಲ್ಲದಿದ್ದರೆ ಮಕ್ಕಳು ಸಮಯದ ಅರಿವೇ ಇಲ್ಲದೆ ಫೋನ್ ಸ್ಕ್ರೀನಿನ ಮುಂದೆ ಮುಳುಗಿಬಿಡುತ್ತಾರೆ.
ಡಿಜಿಟಲ್ ಗೀಳಿನ ಲಕ್ಷಣಗಳು
ಡಿಜಿಟಲ್ ಗೀಳಿನ ಲಕ್ಷಣಗಳೆಂದರೆ ಪ್ರತಿದಿನ ಅತಿ ಹೆಚ್ಚು ಗಂಟೆಗಳು ಮೊಬೈಲ್ ಫೋನ್ ನೋಡುತ್ತಾ ಅಥವಾ ಗೇಮ್ನಲ್ಲಿ ಕಳೆಯುವುದು, ಬೇರೆ ಯಾರಾದರೂ ತಮ್ಮ ಫೋನ್ ತೆಗೆದುಕೊಂಡರೆ ಕೋಪಮಾಡಿಕೊಳ್ಳುವುದು, ಓದು ಅಥವಾ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುವುದು, ರಾತ್ರಿಯ ಹೊತ್ತು ನಿದ್ರೆ ಕೆಡುವುದು, ಕುಟುಂಬದವರ, ಸ್ನೇಹಿತರ ಮತ್ತು ಸಹೋದ್ಯೋಗಿಗಳ ಜೊತೆ ಮಾತುಕತೆ ಕಡಿಮೆಯಾಗುವುದು ಹೊರಗಿನ ಆಟಗಳು ಮತ್ತು ಹಿಂದೆ ಆಸಕ್ತಿಯಿದ್ದ ಹವ್ಯಾಸಗಳಲ್ಲಿ ಆಸಕ್ತಿ ಇಲ್ಲದಿರುವುದು.
ಡಿಜಿಟಲ್ ಗೀಳನ್ನು ನಿಭಾಯಿಸಲು ಮನೆಯಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಬಳಸಲು ಸಮಯದ ಮಿತಿ ಹಾಕಿ. ಊಟದ ಸಮಯ, ನಿದ್ರೆಗೆ ಮುನ್ನ ಮತ್ತು ಓದು ಸಮಯದಲ್ಲಿ ಫೋನ್ ಬೇಡ ಎಂಬ ನಿಯಮ ಮಾಡುವುದು ಒಳ್ಳೆಯದು. ಮಕ್ಕಳು ಯಾವ ಆಪ್ ಬಳಸುತ್ತಾರೆ, ಏಕೆ ಇಷ್ಟ, ಎಂಬುದನ್ನು ಕೇಳಿ. ಗದರಿಸುವ ಬದಲು ಅವರು ಏನು ಹೇಳುತ್ತಾರೆ ಎಂದು ಕೇಳುವುದು ಮುಖ್ಯ. ಕ್ರೀಡೆ, ಪುಸ್ತಕ ಓದು, ಸಂಗೀತ, ಚಿತ್ರಕಲೆ, ತೋಟಗಾರಿಕೆ ಇಂತಹ ನೇರವಾಗಿ ತೊಡಗಿಕೊಳ್ಳುವ ಚಟುವಟಿಕೆಗಳು ಮನಸ್ಸಿಗೆ ಸಮತೋಲನ ಕೊಡುತ್ತವೆ.
ಡಿಜಿಟಲ್ ಗೀಳು ತಪ್ಪಿಸಲು ಹಿರಿಯರ ಪಾತ್ರ
ಮನೆಯಲ್ಲಿ ದೊಡ್ಡವರು ಕೂಡ ದಿನವಿಡೀ ಫೋನ್ನಲ್ಲಿ ಮುಳುಗಿದ್ದರೆ ಮಕ್ಕಳು ಅದನ್ನೇ ಅನುಸರಿಸುತ್ತಾರೆ. ಆದ್ದರಿಂದ ಪೋಷಕರೂ ಫೋನ್ ಬಳಕೆಯ ಮಿತಿಯನ್ನು ಪಾಲಿಸಬೇಕು.ಮಕ್ಕಳು ದುಃಖ, ಒತ್ತಡ, ಏಕಾಂತ ಅನುಭವಿಸುತ್ತಿದ್ದರೆ ಅದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಹಿತಕರವಾಗಿ ಮಾತನಾಡಿ ಅವರು ಸಮಸ್ಯೆಗಳಿಂದ ಹೊರಬರಲು ಸಹಾಯ ಮಾಡಬೇಕು.
ಡಿಜಿಟಲ್ ಗೀಳು ಗಂಭೀರವಾಗಿದ್ದರೆ ಮಕ್ಕಳಿರಲಿ ಯುವಜನರಿರಲಿ ಅವರನ್ನು ಕುಟುಂಬಸ್ಥರು ಗದರಿಸಿ ಹೆದರಿಸುವ ಬದಲು ಆಪ್ತ ಸಮಾಲೋಚಕರ ಬಳಿಗೆ ಕರೆದೊಯ್ಯಬೇಕು. ಅವರು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಿ ಗೀಳಿನಿಂದ ಹೊರಬರಲು ಸಹಾಯ ಮಾಡುತ್ತಾರೆ.
ಡಿಜಿಟಲ್ ಜಗತ್ತು ಕೆಟ್ಟದ್ದೇನಲ್ಲ. ಅದು ಕಲಿಕೆ, ಸೃಜನಶೀಲತೆ ಮತ್ತು ಸಂಪರ್ಕಕ್ಕೆ ಇರುವ ದೊಡ್ಡ ಅವಕಾಶ. ಆದರೆ ಮಿತಿ ಮೀರಿದರೆ ಅಪಾಯ. ಸಮತೋಲನ, ಗಮನ ಮತ್ತು ಪ್ರೀತಿಪೂರ್ಣ ಮಾರ್ಗದರ್ಶನ ಡಿಜಿಟಲ್ ಗೀಳನ್ನು ಸರಿಪಡಿಸಲು ಬಹಳ ಮುಖ್ಯ.

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com
