ರಾಮನಗರ: 64ನೇ ವರ್ಷಕ್ಕೆ ಕಾಲಿಟ್ಟಿರುವ ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಅವರ ಹುಟ್ಟುಹಬ್ಬದ ಶುಕ್ರವಾರ ರಾಮನಗರಗದಲ್ಲಿ ನಡೆಯಿತು. ಈ ಸಂಭ್ರಮಾಚರಣೆಯಲ್ಲಿ 2023ರ ವಿಧಾನಸಭಾ ಚುನಾವಣೆಯ (Karnataka Assembly Elections 2023) ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಆಗಲಿದೆ ಎಂದು ಕಾತರದಿಂದ ಕಾಯುತ್ತಿದ್ದ ಟಿಕೆಟ್ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಆದ್ರೆ, ಇದೀಗ ಈ ಬಗ್ಗೆ ಸ್ವತಃ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಸೋಮವಾರ (ಡಿಸೆಂಬರ್ 19) ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಆಕ್ಷೇಪಣೆ ಬೆನ್ನಲ್ಲೇ ಎಚ್ಚೆತ್ತುಕೊಂಡ ಸಿದ್ದರಾಮಯ್ಯ, ಕುಷ್ಟಗಿ ಸಮಾವೇಶದಲ್ಲಿ ಜಾಣ ನಡೆ
ರಾಮನಗರ ತಾಲೂಕಿನ ಗುಡ್ಡದಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ನಿನ್ನೆಯೇ(ಡಿಸೆಂಬರ್ 16) ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕಿತ್ತು. ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಬೇಡ ಎಂದು ಹೇಳಿದ್ದರು. ಟಿಟಿಡಿ ಗೈಡ್ಲೈನ್ ಉಲ್ಲಂಘನೆ ಆಗಬಾರದೆಂದು ಮುಂದೂಡಿದ್ದೇವೆ. ಸೋಮವಾರ JDS ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ಸ್ಪಷ್ಟಪಡಿಸಿದರು.
ಇನ್ನು ಇದೇ ವೇಳೆ ರಾಮನಗರ ಕ್ಷೇತ್ರದಲ್ಲಿ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಎಚ್ಡಿಕೆ, ರಾಮನಗರದಲ್ಲಿ ಅಭ್ಯರ್ಥಿ ಆಯ್ಕೆ ಬಗ್ಗೆ ಯಾವುದೇ ಸಮಸ್ಯೆ ಇಲ್ಲ. ಅಂತಿಮವಾಗಿ ಕಾರ್ಯಕರ್ತರು ಅಭ್ಯರ್ಥಿ ನಿರ್ಧಾರ ಮಾಡುತ್ತಾರೆ. ನೀವೇ ಅಭ್ಯರ್ಥಿ ಆಯ್ಕೆ ಮಾಡಿ ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ನಮ್ಮ ಕಾರ್ಯಕರ್ತರ ತೀರ್ಮಾನಕ್ಕೆ ತಲೆಬಾಗುತ್ತೇನೆ ಎಂದು ಹೇಳಿದರು.
ರಾಮನಗರ ನನ್ನನ್ನು ಬೆಳೆಸಿದ ಕ್ಷೇತ್ರ. ರಾಮನಗರ ಕ್ಷೇತ್ರದಲ್ಲಿ ಅನಿತಾ ಕೂಡ ಚೆನ್ನಾಗಿ ಕೆಲಸ ಮಾಡಿದ್ದಾರೆ. ಅನಿತಾ ಕುಮಾರಸ್ವಾಮಿ ಬಗ್ಗೆಯೂ ಒಳ್ಳೆಯ ಅಭಿಪ್ರಾಯ ಇದೆ. ನಿಖಿಲ್ ನಿಲ್ಲಬೇಕೋ, ಅನಿತಾ ಕುಮಾರಸ್ವಾಮಿ ನಿಲ್ಲಬೇಕೋ ಅಂತಿಮವಾಗಿ ನಮ್ಮ ಕಾರ್ಯಕರ್ತರು ತೀರ್ಮಾನ ಮಾಡುತ್ತಾರೆ ಎಂದರು.
96 ರಿಂದ 116 ಅಭ್ಯರ್ಥಿಗಳ ಪಟ್ಟಿ ಸಿದ್ಧ
ಸಂಖ್ಯಾಶಾಸ್ತ್ರಜ್ಞರ ಸಲಹೆಗಳಿಗೆ ಬದ್ಧವಾಗಿ 96 ರಿಂದ 116 ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದ್ದು, ಈ ಹಿಂದೆ ನವೆಂಬರ್ನಲ್ಲೇ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿತ್ತು. ಆದ್ರೆ, ಸಮಯ ದಿನಗಳ ಚೆನ್ನಾಗಿಲ್ಲ. ಹಾಗಾಗಿ ಪಟ್ಟಿ ಬಿಡುಗಡೆ ಮಾಡುವುದು ಬೇಡ ಎಂದು ಎಚ್ಡಿ ರೇವಣ್ಣ ಸಲಹೆ ನೀಡಿದ್ದರು. ಅದರಂತೆ ಕುಮಾರಸ್ವಾಮಿ ಡಿಸೆಂಬರ್ 16ರಂದು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಮೊದಲ ಪಟ್ಟಿ ಪ್ರಕಟ ಮಾಡಲು ತೀರ್ಮಾನಿಸಿದ್ದರು. ಆದ್ರೆ, ಕಾರ್ಯಕ್ರಮದಲ್ಲಿ ಧಾರ್ಮಿಕ ವೇದಿಕೆಯಲ್ಲಿ ರಾಜಕೀಯ ಬೇಡ ಎಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿಲ್ಲ.
ಮೊದಲ ಪಟ್ಟಿಯಲ್ಲಿ ಕೆಲವರನ್ನು ಹೊರತುಪಡಿಸಿ ಬಹುತೇಕ ಹಾಲಿ ಶಾಸಕರಿಗೆ ಮಣೆ ಹಾಕಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಒಂದು ಕ್ಷೇತ್ರದಲ್ಲಿ ಒಬ್ಬರೇ ಟಿಕೆಟ್ ಆಕಾಂಕ್ಷಿ ಇರುವ ಅಭ್ಯರ್ಥಿಗಳ ಹೆಸರುಗಳನ್ನು ಸಹ ಫಸ್ಟ್ ಲಿಸ್ಟ್ನಲ್ಲಿ ಪ್ರಕಟಿಸುವ ಸಾಧ್ಯತೆಗಳಿವೆ. ಇದೀಗ ಅಂತಿಮವಾಗಿ ಡಿಸೆಂಬರ್ 19ಕ್ಕೆ ಮೊದಲ ಪಟ್ಟಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಲಾಗಿದ್ದು, ಟಿಕೆಟ್ ಸಿಗುತ್ತೋ ಇಲ್ಲೋ ಎಂದು ಆಕಾಂಕ್ಷಿಗಳ ಎದೆಬಡಿತ ಹಚ್ಚಾಗಿದೆ.
ಮಗನಿಗಾಗಿ ಅನಿತಾ ಕುಮಾರಸ್ವಾಮಿ ಕ್ಷೇತ್ರ ತ್ಯಾಗ?
ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪುತ್ರ ನಿಖಿಲ್ ಗಾಗಿ ವಿಧಾನಸಭಾ ಸ್ಥಾನವನ್ನು ತ್ಯಾಗ ಮಾಡಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ನಿಖಿಲ್ ಕುಮಾರಸ್ವಾಮಿ ಹೆಸರು ಇರುತ್ತಾ ಎನ್ನುವುದೇ ಕುತೂಹಲ ಮೂಡಿಸಿದೆ.
ಅರಸೀಕೆರೆ ಟಿಕೆಟ್ ಯಾರಿಗೆ?
ಅರಸೀಕೆರೆಯ ಶಾಸಕ ಕೆ ಎಲ್ ಶಿವಲಿಂಗೇಗೌಡ ಅವರ ರಾಜಕೀಯ ನಡೆ ತೀವ್ರ ನಿಗೂಢವಾಗಿಯೇ ಉಳಿದಿದೆ. ಈಗಾಗಲೇ ಜೆಡಿಎಸ್ ಪಕ್ಷದ ಕಾರ್ಯಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿರುವ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಆದ್ರೆ, ಇದುವರೆಗೂ ಅವರು ಯಾವುದೇ ಈ ಬಗ್ಗೆ ಮಾತುಗಳನ್ನಾಡಿಲ್ಲ. ಈ ಹಿನ್ನೆಲೆಯಲ್ಲಿ ಮೊದಲ ಪಟ್ಟಿಯಲ್ಲಿ ಅರಸೀಕೆರೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಹೆಸರು ಇರುತ್ತಾ ಎಂದು ಕಾದುನೋಡಬೇಕಿದೆ. ಒಂದು ವೇಳೆ ಶಿವಲಿಂಗೇಗೌಡ ಅವರು ಕಾಂಗ್ರೆಸ್ ಸೇರುವುದು ಪಕ್ಕಾ ಆದ್ರೆ, ಜೆಡಿಎಸ್ ಅಭ್ಯರ್ಥಿ ಯಾರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಅಪ್ಪ-ಮಕ್ಕಳಿಗೆ ಸಿಗುತ್ತಾ?
ಈಗಾಗಲೇ ಜೆಡಿಎಸ್ನಿಂದ ಆಚೆ ಹೋಗಿದ್ದ ಜಿಟಿ ದೇವೇಗೌಡ ಅವರನ್ನು ಮನವೊಲಿಸುವಲ್ಲಿ ಜೆಡಿಎಸ್ ವರಿಷ್ಠ ಎಚ್ಡಿ ದೇವೇಗೌಡ ಯಶಸ್ವಿಯಾಗಿದ್ದಾರೆ. ದೇವೇಗೌಡ್ರ ಮಾತಿಗೆ ಬೆಲೆ ಕೊಟ್ಟು ಜಿಟಿಡಿ ಜೆಡಿಎಸ್ನಲ್ಲೇ ಉಳಿಯಲು ತೀರ್ಮಾನಿಸಿದ್ದಾರೆ. ಆದ್ರೆ, ಎರಡು ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಒಂದು ಚಾಮುಂಡೇಶ್ವರಿ ಕ್ಷೇತ್ರದಿಮದ ತಮಗೆ ಇನ್ನೊಂದು ತಮ್ಮ ಪುತ್ರ ಹರೀಶ್‌ಗೌಡಗೆ ಹುಣಸೂರು ಕ್ಷೇತ್ರದ ಟಿಕೆಟ್ ಕೇಳಿದ್ದಾರೆ. ಇದಕ್ಕೆ ಜೆಡಿಎಸ್ ವರಿಷ್ಠರೂ ಸಹ ಒಪ್ಪಿಕೊಂಡಿದ್ದು, ಮೊದಲ ಪಟ್ಟಿಯಲ್ಲಿ ಅಪ್ಪ-ಮಕ್ಕಳ ಹೆಸರು ಇರುತ್ತೋ ಎನ್ನುವುದನ್ನು ಕಾದುನೋಡಬೇಕಿದೆ.
ಒಟ್ಟಿನಲ್ಲಿ ಜೆಡಿಎಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಡಿಸೆಂಬರ್ 19ಕ್ಕೆ ಪ್ರಕಟವಾಗಲಿದ್ದು, ಯಾರಿಗೆ ಟಿಕೆಟ್? ಯಾರಿಗೆ ಕಟ್? ಎನ್ನುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ