ಭಾರತೀಯ ಚಿತ್ರರಂಗದ ಹೆಸರಾಂತ ನಟ ಕಮಲ್ ಹಾಸನ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಂ ಅವತ್ತು ತಮಿಳುನಾಡಿನ ವಿಧಾನಸಭಾ ಚುನಾವಣೆಯಲ್ಲಿ ಸೋತಿತ್ತು. ಶೂನ್ಯ ಸಂಪಾದನೆ ಆಗಿತ್ತು. ಕಮಲ್ ಸ್ವತಃ ಪರಾಭವಗೊಂಡಿದ್ದರು. ಆಗ ಅವರು ಹೇಳಿದ ಒಂದು ಮಾತು- ನಾನು 20 ವರ್ಷಗಳ ಹಿಂದೆಯೇ ರಾಜಕಾರಣಕ್ಕೆ ಧುಮುಕಬೇಕಿತ್ತು. ಅದರರ್ಥ ಚಿತ್ರರಂಗದಲ್ಲಿ ಖ್ಯಾತಿ ಉತ್ತುಂಗದಲ್ಲಿದ್ದಾಗಲೇ, ವಯಸ್ಸು ಚಿಕ್ಕದಿರುವಾಗಲೇ ಚುನಾವಣಾ ರಾಜಕಾರಣಕ್ಕೆ ಇಳಿದಿದ್ದರೆ ಯಶಸ್ವಿ ಆಗಬಹುದಿತ್ತು ಎಂಬುದು ಅವರ ವಾದವಾಗಿತ್ತು. ತಮಿಳುಚಿತ್ರರಂಗದ ಮತ್ತೊಬ್ಬ ಹೆಸರಾಂತ ನಟ ದಳಪತಿ ವಿಜಯ್ ಖ್ಯಾತಿಯ ಉತ್ತುಂಗದಲ್ಲಿದ್ದಾರೆ. ವಯಸ್ಸೂ ಚಿಕ್ಕದಿದೆ. ರಾಜಕಾರಣಕ್ಕೆ ಧುಮುಕಿದ್ದಾರೆ. ಯಶಸ್ವಿ ಆಗ್ತಾರಾ?
ತಮಿಳುನಾಡು ವಿಧಾನಸಭೆಯ ಒಟ್ಟು 234 ಕ್ಷೇತ್ರಗಳಿಗೆ ಏಪ್ರಿಲ್-ಮೇ ಹೊತ್ತಿಗೆ ಚುನಾವಣೆ. ಅಖಾಡ ನಿಧಾನಕ್ಕೆ ಸಜ್ಜು. ನಟ ವಿಜಯ್ ಅವರದೇ ಹೆಚ್ಚು ಸದ್ದು. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ನೇತೃತ್ವದಲ್ಲಿ ಕಳೆದ ಐದು ವರ್ಷಗಳು ಡಿಎಂಕೆ ಆಳ್ವಿಕೆ. ತಮಿಳುನಾಡಿನಲ್ಲಿ ದ್ರಾವಿಡ ಪಕ್ಷಗಳಾದ ಡಿಎಂಕೆ ಹಾಗೂ ಅಣ್ಣಾಡಿಎಂಕೆ ಸಾಂಪ್ರದಾಯಿಕ ನೇರ ಎದುರಾಳಿಗಳು. ಹೆಸರಾಂತ ಚಲನಚಿತ್ರ ನಟರು ಈ ಹಿಂದೆ ರಾಜಕೀಯ ಪ್ರವೇಶಿಸಿದರೂ ದ್ರಾವಿಡ ಪಕ್ಷಗಳದ್ದೇ ಪಾರುಪತ್ಯ. ಹೀಗಿರುವಾಗ ವಿಜಯ್ ಮತದಾರರ ವಿಶ್ವಾಸ ಗಳಿಸಿ ಗೆದ್ದು ಬೀಗಬಲ್ಲರೇ?
ತಮಿಳುನಾಡಿನಲ್ಲಿ ಡಿಎಂಕೆ, ಅಣ್ಣಾಡಿಎಂಕೆಗೆ ಕಾರ್ಯಕರ್ತರಿದ್ದಾರೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ಸಿಗೂ ಕಾರ್ಯಕರ್ತರಿದ್ದಾರೆ. ವಿಜಯ್ ಅವರಿಗೆ ಅಭಿಮಾನಿಗಳಿದ್ದಾರೆ. ಅಭಿಮಾನಿಗಳೇ ಬೇರೆ, ಕಾರ್ಯಕರ್ತರೇ ಬೇರೆ. ಎಲ್ಲ ಅಭಿಮಾನಿಗಳೂ ಕಾರ್ಯಕರ್ತರಲ್ಲ. ಕಾರ್ಯಕರ್ತರು ಅಭಿಮಾನಿಗಳಾಗಿರಬಹುದು. ಅಭಿಮಾನ ವೋಟಾಗಿ ಪರಿವರ್ತನೆ ಆಗಬೇಕೆಂದೇನೂ ಇಲ್ಲ. ವಿಜಯ್ ತಮ್ಮ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ತಳಮಟ್ಟದಲ್ಲಿ ಕಾರ್ಯಕರ್ತರಿಂದ ಸಂಘಟಿಸಬೇಕಿದೆ. ಪಕ್ಷಕ್ಕೆ ಸೈದ್ಧಾಂತಿಕ ತಳಹದಿ ರೂಪಿಸಬೇಕಿದೆ. ಕಳೆದ ಒಂದೂವರೆ ವರ್ಷಗಳಿಂದ ಅವರು ಆ ಪ್ರಯತ್ನದಲ್ಲೇ ಇದ್ದಾರೆ. ತಮಿಳುನಾಡಿನಲ್ಲಿ ಚಿತ್ರನಟರು ರಾಜಕೀಯ ಪ್ರವೇಶಿಸಿದಾಗ ಅಭಿಮಾನಿಗಳು ಕಾರ್ಯಕರ್ತರಾಗಿರುವ ನಿದರ್ಶನಗಳನ್ನು ಮರೆಯುವಂತಿಲ್ಲ.
ವಿಜಯ್ ಅವರ ಬಹಿರಂಗ ಸಮಾವೇಶಗಳಿಗೆ ಜನಸಾಗರ ಸೇರುತ್ತಿದೆ. ವಿಜಯ್ ಅವರನ್ನು ನೋಡಲು, ಭಾಷಣವನ್ನು ಕೇಳಲು ಬಂದವರೆಲ್ಲರೂ ಅವರ ಪಕ್ಷವನ್ನು ಬೆಂಬಲಿಸುವರೇ? ಸಿನಿಮಾ ಥಿಯೇಟರ್ನಿಂದ ಆಚೆಗೂ ಅಭಿಮಾನ ಹರಿದು ವೋಟಾಗಿ ಪರಿವರ್ತನೆ ಆಗುತ್ತದೆಯೇ? ಈ ಬಾರಿಯ ತಮಿಳುನಾಡು ವಿಧಾನಸಭಾ ಚುನಾವಣೆಯ ಬಹುಮುಖ್ಯವಾದ ಪ್ರಶ್ನೆ ಇದು. ರಾಜಕೀಯ ಪಂಡಿತರಲ್ಲಿ ಕೆರಳಿಸಿರುವ ಕುತೂಹಲವೂ ಹೌದು.
ತಮಿಳು ಚಿತ್ರರಂಗಕ್ಕೂ ಅಲ್ಲಿನ ರಾಜಕಾರಣಕ್ಕೂ ಲಾಗಾಯ್ತಿನಿಂದಲೂ ನಂಟು. ಇಲ್ಲಿ ಸಿನಿಮಾ ಕೇವಲ ಮನರಂಜನೆಯಲ್ಲ, ಅದು ಆಡಳಿತಕ್ಕೂ ಹತ್ತಿರ. ಕಾಲಿವುಡ್ನ ಸಿ.ಎನ್.ಅಣ್ಣಾದೊರೈ, ಎಂ.ಜಿ.ರಾಮಚಂದ್ರನ್, ಕರುಣಾನಿಧಿ, ಜಯಲಲಿತಾ ಮುಖ್ಯಮಂತ್ರಿಗಳಾದವರು. ಅಣ್ಣಾದೊರೈ ಡಿಎಂಕೆ ಸ್ಥಾಪಿಸಿ ತಮಿಳುನಾಡಿನಲ್ಲಿ 1967ರಲ್ಲೇ ಕಾಂಗ್ರೆಸ್ಸೇತರ ಪ್ರಥಮ ಮುಖ್ಯಮಂತ್ರಿಯಾದವರು. ಎಂಜಿಆರ್ 1972ರಲ್ಲಿ ಅಣ್ಣಾಡಿಎಂಕೆ ಸ್ಥಾಪಿಸಿ 1977 ರಿಂದ 87ರ ವರೆಗೆ ಹತ್ತು ವರ್ಷಗಳ ಕಾಲ ಸತತ ಮೂರು ಬಾರಿ ಮುಖ್ಯಮಂತ್ರಿಯಾಗಿದ್ದವರು. ಕರುಣಾನಿಧಿ 19 ವರ್ಷಗಳ ಕಾಲ ರಾಜ್ಯಭಾರ ಮಾಡಿದವರು. ಜಯಲಲಿತಾ 14 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ಎಂಜಿಆರ್, ಕರುಣಾನಿಧಿ ಇಬ್ಬರೂ ಡಿಎಂಕೆಯಲ್ಲೇ ಇದ್ದವರು. ಇವರಿಬ್ಬರ ಮಧ್ಯೆ ಉಂಟಾದ ಭಿನ್ನಾಭಿಪ್ರಾಯದಿಂದ ಎಂಜಿಆರ್ ಡಿಎಂಕೆಯಿಂದ ಹೊರ ಬಂದು ಅಣ್ಣಾಡಿಎಂಕೆ ಸ್ಥಾಪಿಸಿದವರು. ಎಂಜಿಆರ್ ನಂತರ ಅವರ ಪಕ್ಷದಲ್ಲಿ ಉತ್ತರಾಧಿಕಾರಿಯಾದವರು ಜಯಲಲಿತಾ.
ತಮಿಳುನಾಡಿನಲ್ಲಿ ರಾಜಕೀಯ ರಂಗ ಪ್ರವೇಶಿಸಿದ ಮತ್ತೊಬ್ಬ ನಾಯಕ ನಟ ವಿಜಯಕಾಂತ್. ಅವರು 2005ರಲ್ಲಿ ಸ್ಥಾಪಿಸಿದ ಪಕ್ಷ ದೇಸಿಯ ಮುರ್ಪೊಕ್ಕು ದ್ರಾವಿಡ ಕಳಗಂ (ಡಿಎಂಡಿಕೆ). ವಿಜಯಕಾಂತ್ ತಮಿಳುನಾಡಿನ ವಿಧಾನಸಭೆಯಲ್ಲಿ 2011 ರಿಂದ 16ರವ ರೆಗೆ ಪ್ರತಿಪಕ್ಷದ ನಾಯಕರಾದರು.
ತಮಿಳುಚಿತ್ರರಂಗದ ಮತ್ತೊಬ್ಬ ಹೆಸರಾಂತ ನಟ ಶಿವಾಜಿ ಗಣೇಶನ್ ಮೊದಲು ಡಿಎಂಕೆಯಲ್ಲಿದ್ದರು. ನಂತರ ಕಾಂಗ್ರೆಸ್ನಿಂದ ಸಂಸದರೂ ಆಗಿದ್ದರು. ಕಾಂಗ್ರೆಸ್ ಪಕ್ಷವು ಅಣ್ಣಾಡಿಎಂಕೆ ಜೊತೆ ಮೈತ್ರಿ ಸಾಧಿಸಿದಾಗ ಶಿವಾಜಿ ಗಣೇಶನ್ ತಮ್ಮದೇ ಸ್ವಂತ ಪಕ್ಷ ತಮಿಳಿಗ ಮುನ್ನೇತ್ರ ಮುನ್ನಾನಿ ಪಕ್ಷವನ್ನು ಸ್ಥಾಪಿಸಿದರು. ಚುನಾವಣೆಯಲ್ಲಿ ನೆಲಕಚ್ಚಿದಾಗ ಜನತಾದಳದಲ್ಲಿ ತಮ್ಮ ಪಕ್ಷವನ್ನು ವಿಲೀನಗೊಳಿಸಿದರು.
ಹೆಸರಾಂತ ನಟ ಶರತ್ಕುಮಾರ್ ಮೊದಲು ಡಿಎಂಕೆ ಸೇರಿ ಸಂಸದರಾದರು. ಅವರು 2007ರಲ್ಲಿ ಅಖಿಲ ಭಾರತ ಸಮತುವ ಮಕ್ಕಳ್ ಕಚ್ಚಿ (ಎಐಎಸ್ಎಂಕೆ) ಪಕ್ಷವನ್ನು ಹುಟ್ಟುಹಾಕಿದರು. ನಂತರ 2024ರಲ್ಲಿ ಬಿಜೆಪಿಯಲ್ಲಿ ಸೇರ್ಪಡೆ ಮಾಡಿದರು.
ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದ ನಂತರ ಕಮಲ್ ಹಾಸನ್ ರಾಜಕೀಯವಾಗಿ ಸಕ್ರಿಯರಾದರು. ಫೆಬ್ರುವರಿ 2018ರಲ್ಲಿ ಮಕ್ಕಳ್ ನೀಧಿ ಮಯ್ಯಂ ಪಕ್ಷ ಸ್ಥಾಪಿಸಿದರು. ಆಗ ಅಧಿಕಾರದಲ್ಲಿದ್ದ ಅಣ್ಣಾಡಿಎಂಕೆ ಸರಕಾರದ ನೀತಿಗಳನ್ನು ಕಟುವಾಗಿ ಟೀಕಿಸಿದರು. ಬಲಪಂಥೀಯ ಬಿಜೆಪಿಯನ್ನು ತಾತ್ವಿಕವಾಗಿ ವಿರೋಧಿಸಿದರು. ಕಮಲ್ ಹಾಸನ್ ಅವರಿಗೆ ವಿಧಾನಸಭೆಯಲ್ಲಿ ಖಾತೆಯನ್ನೇ ತೆರೆಯಲು ಸಾಧ್ಯವಾಗಲಿಲ್ಲ. ಈಗ ಡಿಎಂಕೆ ದೋಸ್ತಿ ಮಾಡಿ ರಾಜ್ಯಸಭಾ ಸದಸ್ಯರಾಗಿದ್ದಾರೆ.
ತಮಿಳುಚಿತ್ರರಂಗದ ಕಾರ್ತಿಕ್, ಸೀಮನ್, ಕೆ.ಭಾಗ್ಯರಾಜ್, ಖುಷ್ಬೂ, ನೆಪೋಲಿಯನ್, ಟಿ.ರಾಜೇಂದರ್, ಕರುಣಾಸ್ ಇವರೆಲ್ಲರೂ ರಾಜಕಾರಣದಲ್ಲಿ ಒಂದು ಕೈ ನೋಡಿದವರೇ. ಈಗ ದಳಪತಿಯ ದಾಳ.
ಸಿ.ಜೋಸೆಫ್ ವಿಜಯ್ ಅವರು ದಳಪತಿ ವಿಜಯ್ ಎಂದೇ ಹೆಸರುವಾಸಿ. ವಿಜಯ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ ಕರೆಯುವುದೇ ದಳಪತಿ ಎಂದು. ದಳಪತಿ ಅಂದರೆ ಕಮಾಂಡರ್ ಎಂದರ್ಥ. ಅವರ ಈ ಇಮೇಜು ರಾಜಕಾರಣಕ್ಕೆ ಬುನಾದಿ ಇದ್ದಂತೆ. ವಿಜಯ್ ಅವರ ಒಂದು ಚಿತ್ರ 2013ರಲ್ಲಿ ಬಿಡುಗಡೆಯಾಯಿತು. ಇದರ ಹೆಸರು ತಲೈವ (ನಾಯಕ). ಈ ಚಿತ್ರದ ಟ್ಯಾಗ್ ಲೈನ್ ಇದ್ದದ್ದು ಏನು ಗೊತ್ತೇ? ‘ಟೈಮ್ ಟು ಲೀಡ್ ’.
ವಿಜಯ್ ಚಿತ್ರರಂಗದಲ್ಲಿ 1990ರ ದಶಕದಲ್ಲಿ ರೋಮಾಂಟಿಕ್ ಹೀರೋ, 2000ರ ದಶಕದಲ್ಲಿ ಆಂಗ್ರಿ ಯಂಗ್ ಮ್ಯಾನ್, 2012ರ ನಂತರ ತಮ್ಮ ಇಮೇಜನ್ನು ಜನನಾಯಕನಂತೆ, ರಕ್ಷಕನಂತೆ, ಸಾಮಾಜಿಕ ನ್ಯಾಯದ ಪರ ಧ್ವನಿ ಎತ್ತುವರಂತೆ ರೂಪಿಸಿಕೊಂಡವರು. ಒಂದು ರೀತಿ ರಾಜಕೀಯ ಪ್ರವೇಶದ ಲೆಕ್ಕಾಚಾರದಂತೆ. ವಿಜಯ್ ಅನೇಕ ವರ್ಷಗಳ ಹಿಂದೆ ತಮ್ಮ ಅಭಿಮಾನಿಗಳ ಸಂಘಕ್ಕೆ ಚಾಲನೆ ನೀಡುವಾಗ ಒಂದು ಘೋಷಣೆ ಹೊರಡಿಸಿದ್ದರು. ಅದು ಹೀಗಿತ್ತು- ‘ಉನ್ನಾಲ್ ಮುದಿಯುಮ್’ ಅಂದರೆ ‘ನೀವು ಮಾಡಬಲ್ಲಿರಿ’. ಬೆಳ್ಳಿತೆರೆಯ ಆಚೆಗೂ ತಮ್ಮ ಆಕಾಂಕ್ಷೆಯನ್ನು ವಿಜಯ್ ಅವತ್ತೇ ಹೊರಹಾಕಿದ್ದರೇ?
ಎಂಜಿಆರ್ ಹಾಗೂ ಜಯಲಲಿತಾ ಚಿತ್ರರಂಗಕ್ಕೆ ಗುಡ್ಬೈ ಹೇಳಿಯೇ ರಾಜಕಾರಣಕ್ಕೆ ಧುಮುಕಿದವರು. ವಿಜಯ್ ಅದೇ ದಾರಿಯಲ್ಲಿ ಸಾಗಿದ್ದಾರೆ. ಹೊಸ ಪಕ್ಷ ಹುಟ್ಟುಹಾಕಿಯೇ ರಾಜಕಾರಣಕ್ಕೆ ಧುಮುಕಿದ್ದಾರೆ. ಚಿತ್ರರಂಗದಿಂದ ನಿವೃತ್ತಿಯ ಮಾತನ್ನೂ ಆಡಿದ್ದಾರೆ.
ತಮಿಳುನಾಡಿನ 50 ವರ್ಷಗಳ ಡಿಎಂಕೆ, ಅಣ್ಣಾಡಿಎಂಕೆ ರಾಜಕಾರಣದ ಬಗ್ಗೆ ಯುವಜನಾಂಗ ಬೇಸತ್ತಿದ್ದಾರೆ. ಹೊಸ ತಲೆಮಾರಿನ ಮತದಾರರಲ್ಲಿ ವಿಜಯ್ ತಮ್ಮ ಛಾಪು ಒತ್ತಿದ್ದಾರೆ ಎಂಬುದು ವಿಜಯ್ ಅಭಿಮಾನಿಗಳ ವಾದ. ತಮಿಳುನಾಡು ಅನೇಕ ವಿಜಯರನ್ನು ಕಂಡಿದೆ ಎಂಬುದು ಡಿಎಂಕೆ ತಿರುಗೇಟು. ಒಂದಂತೂ ಸತ್ಯ. ವಿಜಯ್ ರಾಜಕೀಯ ಪ್ರವೇಶದ ನಂತರ ತಮಿಳುನಾಡಿನ ರಾಜಕೀಯ ಚಿತ್ರಣವೇ ನಿಧಾನವಾಗಿ ಬದಲಾಗುತ್ತಿದೆ.
ವಿಜಯ್ ಅವರು ತಮ್ಮ ಭಾಷಣದಲ್ಲಿ ಎಂಜಿಆರ್ ಹಾಗೂ ಜಯಲಲಿತಾ ಅವರನ್ನು ಹೊಗಳುತ್ತಿದ್ದಾರೆ. ಅಣ್ಣಾದೊರೈ, ಎಂಜಿಆರ್ ಕಟೌಟ್ ಹಾಕುತ್ತಿದ್ದಾರೆ. ಸಿಎಂ ಸ್ಟಾಲಿನ್ ಹಾಗೂ ಅಣ್ಣಾಡಿಎಂಕೆ ಪ್ರಧಾನ ಕಾರ್ಯದರ್ಶಿ, ಪ್ರತಿಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಅವರು ಅಣ್ಣಾದೊರೈ ಹಾಗೂ ಎಂಜಿಆರ್ ಅವರ ಪರಂಪರೆಯನ್ನು ಅನುಸರಿಸುತ್ತಿಲ್ಲ ಎಂದು ಟೀಕಿಸುತ್ತಿದ್ದಾರೆ. ಆ ಮೂಲಕ ದ್ರಾವಿಡ ಪಕ್ಷಗಳ ಹತಾಶ ಕಾರ್ಯಕರ್ತರನ್ನು ಸೆಳೆಯುವ ಪ್ರಯತ್ನ ಅವರದು.
ಚುನಾವಣಾ ಸಮರ ಇರುವುದೇ ಟಿವಿಕೆ ಹಾಗೂ ಡಿಎಂಕೆ ನಡುವೆ. ಜನರು ಈಗಾಗಲೇ ಡಿಲೀಟ್ ಮಾಡಿರುವ ಪಕ್ಷಗಳ ಬಗ್ಗೆ ನಾನೇಕೆ ಮಾತಾಡಲಿ ಎಂಬುದು ವಿಜಯ್ ವಾದ. ಅಧಿಕಾರದಲ್ಲಿ ಯಾರು ಇದ್ದಾರೆಯೋ ಅವರನ್ನು ಮುಖ್ಯ ಗುರಿಯಾಗಿಸಿಕೊಂಡರೆ ಸ್ಪರ್ಧೆಯಲ್ಲಿ ಹಾದಿ ಸುಗಮ. ಪ್ರಭುತ್ವ ವಿರೋಧಿ ಮತಗಳನ್ನು ತನ್ನ ಕಡೆ ಕ್ರೂಢೀಕರಿಸಿಕೊಳ್ಳಬಹುದು ಎಂಬುದು ವಿಜಯ್ ಲೆಕ್ಕಾಚಾರ.
ವಿಜಯ್ ಅವರು ಅಣ್ಣಾಡಿಎಂಕೆ ಹಾಗೂ ಎಂಡಿಎಂಕೆಯ ಹತಾಶ ಕಾರ್ಯಕರ್ತರನ್ನು ಸೆಳೆಯುತ್ತಿದ್ದಾರೆ. ಬಿಜೆಪಿ ವಿರೋಧಿ ಹೇಳಿಕೆಗಳಿಂದ ಅಲ್ಪಸಂಖ್ಯಾತರ ವೋಟುಗಳ ಮೇಲೆ ಕಣ್ಣು ನೆಟ್ಟಿದ್ದಾರೆ. ಅಣ್ಣಾಡಿಎಂಕೆಯ ಉಚ್ಛಾಟಿತ ನಾಯಕ ಕೆ.ಎ.ಸೆಂಗೋಟಿಯನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗಾಗಲೇ ವಿಜಯ್ ಅವರ ಟಿವಿಕೆ ಸೇರಿದ್ದಾರೆ. ಸೆಂಗೋಟಿಯನ್ ಸಚಿವರಾಗಿದ್ದವರು. ಒಂಬತ್ತು ಬಾರಿ ಶಾಸಕರಾಗಿದ್ದರು. ಸೆಂಗೋಟಿಯನ್ ಈಗ ಟಿವಿಕೆಯ ಉನ್ನತ ಮಟ್ಟದ ಆಡಳಿತ ಸಮಿತಿಯ ಮುಖ್ಯ ಸಂಚಾಲಕರು.
ತಮಿಳುನಾಡಿನ ಡಿಎಂಕೆಯ ಸ್ಟಾಲಿನ್ ಸರಕಾರ ಚುನಾವಣೆ ಹತ್ತಿರವಿರುವಾಗಲೇ 1.31 ಕೋಟಿ ಮಹಿಳೆಯರ ಖಾತೆಗಳಿಗೆ ತಲಾ ಐದು ಸಾವಿರ ರೂಪಾಯಿ ವರ್ಗಾಯಿಸಿದೆ. ಇದು ಮಹಿಳಾ ಮತದಾರರನ್ನು ಓಲೈಸಲು ಡಿಎಂಕೆಯ ತಂತ್ರ. ತಮಿಳುನಾಡಿನ ರಾಜಕಾರಣದಲ್ಲಿ ಇದು ಬಿರುಗಾಳಿ ಎಬ್ಬಿಸಿದೆ.
ಇದಕ್ಕೆ ವಿಜಯ್ ಪ್ರತಿಕ್ರಿಯೆ ಹೀಗಿದೆ- “ಸ್ಟಾಲಿನ್ ಸರಕಾರದ ಹಣ ತಗೊಳ್ಳಿ. ಏಕೆಂದರೆ, ಆ ಹಣ ನಿಮ್ಮದು. ಹಣ ಪಡೆದು ಅವರ ಕಿವಿಯಲ್ಲಿ ವಿಷಲ್ನಿಂದ ಊದಿರಿ’’. ಅಂದಹಾಗೆ ವಿಜಯ್ ಅವರ ಟಿವಿಕೆ ಪಕ್ಷದ ಚಿಹ್ನೆ ವಿಷಲ್. ದಳಪತಿ ವಿಜಯ್ ದಾಳವನ್ನಂತೂ ಉರುಳಿಸುತ್ತಿದ್ದಾರೆ.
– ಕೂಡ್ಲಿ ಗುರುರಾಜ, ಹಿರಿಯ ಪತ್ರಕರ್ತರು
kudliguru@gmail.com
