ಹೊಸದಿಲ್ಲಿ: ಪ್ರಖ್ಯಾತ ತಮಿಳುನಟ ಡೇನಿಯಲ್ ಬಾಲಾಜಿ ಶುಕ್ರವಾರ ರಾತ್ರಿ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಶುಕ್ರವಾರ ಎದೆ ನೋವು ಕಾಣಿಸಿಕೊಂಡ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. 48ನೇ ವಯಸ್ಸಿನಲ್ಲೇ ಈ ಪ್ರತಿಭಾವಂತ ನಟ ನಿಧನರಾಗಿರುವುದು ತಮಿಳು ಚಿತ್ರರಂಗ ಮತ್ತು ಅವರ ಅಭಿಮಾನಿಗಳನ್ನು ಕಂಗೆಡಿಸಿದೆ.
ಬಾಲಾಜಿ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾಂಜಲಿ ಸಂದೇಶಗಳು ಹರಿದಾಡುತ್ತಿವೆ.
ಕಮಲಹಾಸನ್ ಅವರ ‘ಮರುದುನಾಯಗಂ’ ಚಿತ್ರದಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೇಜರ್ ಆಗಿ ತಮ್ಮ ವೃತ್ತಿಜೀವನ ಆರಂಭಿಸಿದ ಬಾಲಾಜಿ, ರಾಧಿಕಾ ಶರತ್ ಕುಮಾರ್ ಅವರ ‘ಚಿಟ್ಟಿ’ ಮೂಲಕ ಟೆಲಿವಿಷನ್ ವಿಭಾಗಕ್ಕೆ ವಲಸೆ ಹೋದರು. ಅಲ್ಲಿ ಅವರು ನಿರ್ವಹಿಸಿದ ಡೇನಿಯಲ್ ಪಾತ್ರದಿಂದಾಗಿ ಬೆಳ್ಳಿಪರದೆಯಲ್ಲಿ ಡೇನಿಯಲ್ ಬಾಲಾಜಿ ಎಂದೇ ಪ್ರಸಿದ್ಧರಾದರು.
‘ಕಕ್ಕಾ ಕಕ್ಕಾ’ ಮತ್ತು ವೆಟ್ಟಿಯಾಡು ವಿಲಯಾಡು’ ಚಿತ್ರಗಳಲ್ಲಿ ಅವರ ನಟನೆ ಸ್ಮರಣೀಯ. 2022ರಲ್ಲಿ ಅವರು ತಮಿಳು ಚಿತ್ರ “ಏಪ್ರಿಲ್ ಮಧತಿಲ್” ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ತಮಿಳು ಚಿತ್ರಗಳ ಹೊರತಾಗಿ ಅವರು, ಹಲವು ಮಲಯಾಳಂ, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲೂ ನಟಿಸಿದ್ದರು. ‘ಅರಿಯವನ್’ ಅವರ ಕೊನೆಯ ಚಿತ್ರ.