ಉಡುಪಿ: ತರಗತಿಯೊಳಗೆ ವಿದ್ಯಾರ್ಥಿಗೆ ಭಯೋತ್ಪಾದಕ (terrorist) ಎಂದು ಪ್ರೊಫೆಸರ್ ಒಬ್ಬರೂ ನಿಂದಿಸಿರುವಂತಹ ಘಟನೆ ಉಡುಪಿಯ ಮಾಹೆ ವಿವಿಯ ಎಂಐಟಿ ಕಾಲೇಜಿನಲ್ಲಿ ನ. 26ರಂದು ನಡೆದಿದೆ. ವಿದ್ಯಾರ್ಥಿಗಳ ಜತೆ ಮಾತಾಡುವಾಗ ಮುಸ್ಲಿಮರು ಟೆರರಿಸ್ಟ್ಗಳು ಎಂಬ ಅರ್ಥದಲ್ಲಿ ಪ್ರಾಧ್ಯಾಪಕ ಹೇಳಿದ್ದಾರೆ ಎಂದು ನಿಂದನೆ ಆರೋಪ ಮಾಡಲಾಗಿದೆ. ಪ್ರೊಫೆಸರ್ ಮಾತಿಗೆ ತರಗತಿಯಲ್ಲೇ ವಿದ್ಯಾರ್ಥಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಸಮುದಾಯವನ್ನು ಟೆರರಿಸ್ಟ್ ಎನ್ನಬೇಡಿ ಎಂದು ವಿದ್ಯಾರ್ಥಿ ಹೇಳಿದ್ದಾರೆ. ವಿದ್ಯಾರ್ಥಿ ಆಕ್ಷೇಪಿಸುತ್ತಿದ್ದಂತೆ ಕೂಡಲೇ ಪ್ರಾಧ್ಯಾಪಕ ಕ್ಷಮೆ ಕೇಳಿದ್ದಾರೆ. ನೀವು ಕ್ಷಮೆ ಕೇಳಿದ ತಕ್ಷಣ ಆರೋಪ ಬದಲಾಗಲ್ಲ ಎಂದು ವಿದ್ಯಾರ್ಥಿ ತಿರುಗೇಟು ನೀಡಿದ್ದಾನೆ. ಸದ್ಯ ಪ್ರಾಧ್ಯಾಪಕರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಾಧ್ಯಾಪಕನ ವಿರುದ್ಧ ಕ್ರಮಕೈಗೊಳ್ಳಲಾಗಿದ್ದು, ಪ್ರೊಫೆಸರ್ನ್ನು ಅಮಾನತುಗೊಳಿಸಿ ಮಾಹೆ ವಿವಿ ತನಿಖೆಗೆ ನಿರ್ಧರಿಸಿದೆ. ವಿದ್ಯಾರ್ಥಿಗೆ ಕೌನ್ಸಿಲಿಂಗ್ ಮೂಲಕ ಮಾಹೆ ವಿವಿ ಸಾಂತ್ವನ ಹೇಳಿದೆ.