ಬೆಂಗಳೂರು: ಪಶ್ಚಿಮ ಬಂಗಾಳ ಮೂಲದ ಬೆಂಗಳೂರಿನ ಸ್ಟಾರ್ಟ್‍ಅಪ್ ಕಂಪೆನಿಯೊಂದರ ಸಿಇಓ ಸುಚನಾ ಸೇಠ್(39) ಅವರು ತನ್ನ ನಾಲ್ಕು ವರ್ಷದ ಮಗು ಚಿನ್ಮಯ್‍ನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯೂರಿನಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ಮುಗಿದು ಬೆಂಗಳೂರಿನ ಹರಿಶ್ಚಂದ್ರ ಘಾಟ್‍ನಲ್ಲಿ ಬುಧವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಯಲ್ಲಿ ಮಗುವಿನ ತಂದೆ ವೆಂಕಟರಮಣ ಅವರು ಭಾಗಿಯಾಗಿದ್ದಾರೆ. ಚಿತ್ರದುರ್ಗದ ಹಿರಿಯೂರು ತಾಲೂಕು ಆಸ್ಪತ್ರೆಯಲ್ಲಿ ಜ.9ರ ಮಂಗಳವಾರ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮಗುವಿನ ಮೃತದೇಹವನ್ನು ಮಂಗಳವಾರ ಮಧ್ಯರಾತ್ರಿ 1:45ಕ್ಕೆ ಐಮಂಗಲ ಪೊಲೀಸ್ ಠಾಣೆಯಿಂದ ಬೆಂಗಳೂರಿಗೆ ರವಾನಿಸಲಾಯಿತು. ಯಶವಂತಪುರ ಬಳಿ ಇರುವ ಬ್ರಿಗೇಡ್ ಗೇಟ್‍ವೇ ರೆಸಿಡೆನ್ಸಿಯಲ್ಲಿರುವ ತಂದೆ ನಿವಾಸದ ಬಳಿ ಸಾರ್ವಜನಿಕ ದರ್ಶನದ ಬಳಿಕ ಬೆಳಗ್ಗೆ ನಗರದ ಹರಿಶ್ಚಂದ್ರ ಘಾಟ್‍ನಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
ಗೋವಾದ ಸರ್ವಿಸ್ ಅಪಾರ್ಟ್‍ಮೆಂಟ್‍ನಲ್ಲಿ ಮಗುವನ್ನು ಕೊಲೆಗೈದು ಸೂಟ್‍ಕೇಸ್‍ನಲ್ಲಿ ಹಾಕಿ ಬೆಂಗಳೂರಿಗೆ ಟ್ಯಾಕ್ಸಿಯಲ್ಲಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದ ತಾಯಿ ಸುಚನಾ ಸೇಠ್ ರನ್ನು ಜ.9ರಂದು ಚಿತ್ರದುರ್ಗ ಜಿಲ್ಲೆಯ ಐಮಂಗಲ ಠಾಣಾ ಪೊಲೀಸರು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದರು.
ನಂತರ ಪ್ರಕರಣವನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಪತಿ ವೆಂಕಟರಮಣ ಜೊತೆ ಇದ್ದ ಸಂಬಂಧ, ಕುಟುಂಬ ಹಾಗೂ ಮಗುವಿನ ಹತ್ಯೆಗೆ ವಿಚಾರಣೆಗೊಳಪಡಿಸಲು ಸುಚನಾಳನ್ನು ಗೋವಾ ಪೊಲೀಸರು 6 ದಿನ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಪತಿ ವೆಂಕಟರಮಣರನ್ನು ಸಹ ಕರೆಸಿ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.