Home ಕರ್ನಾಟಕ ತಾಯಿ, ಪತ್ನಿ ಹಾಗೂ 3 ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ತಾಯಿ, ಪತ್ನಿ ಹಾಗೂ 3 ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

38
0

ಸೀತಾಪುರ್ (ಉತ್ತರ ಪ್ರದೇಶ): ಕುಟುಂಬವೊಂದರ ಆರು ಮಂದಿ ಮೃತಪಟ್ಟಿರುವ ಸುದ್ದಿ ಉತ್ತರ ಪ್ರದೇಶದ ಸೀತಾಪುರ್ ಪ್ರದೇಶದಲ್ಲಿ ಆಘಾತವನ್ನುಂಟು ಮಾಡಿದೆ. ವ್ಯಕ್ತಿಯೊಬ್ಬ ತನ್ನ ಆತ್ಮಹತ್ಯೆಗೂ ಮುನ್ನ ತನ್ನ ಕುಟುಂಬದ ಐವರು ಸದಸ್ಯರನ್ನು ಭೀಕರವಾಗಿ ಹತ್ಯೆಗೈದಿದ್ದಾನೆ.

ಈ ಘಟನೆಯು ಶುಕ್ರವಾರ ಪಲಪುರ್ ಗ್ರಾಮದಲ್ಲಿ ನಡೆದಿದೆ. ಪೊಲೀಸರ ವರದಿಯ ಪ್ರಕಾರ, ಮಾನಸಿಕ ಅಸ್ವಸ್ಥನೆಂದು ಹೇಳಲಾಗಿರುವ ವ್ಯಕ್ತಿಯೊಬ್ಬ ತನ್ನ ತಾಯಿಗೆ ಗುಂಡಿಟ್ಟು ಹತ್ಯೆಗೈದು, ತನ್ನ ಪತ್ನಿಯ ಮೇಲೆ ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಆಕೆಯನ್ನೂ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.

ನಂತರ, ಆತ ತನ್ನ ಮನೆಯ ಮಹಡಿಯಿಂದ ತನ್ನ ಮೂವರು ಮಕ್ಕಳನ್ನು ನೆಲಕ್ಕೆಸೆದು ಅವರನ್ನೂ ಕೊಂದಿದ್ದಾನೆ. ಕುಟುಂಬದ ಐವರು ಸದಸ್ಯರನ್ನು ಹತ್ಯೆಗೈದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರೋಪಿಯು ಮದ್ಯವ್ಯಸನಿಯಾಗಿದ್ದ ಹಾಗೂ ಮಾನಸಿಕ ಅಸ್ವಸ್ಥನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸೀತಾಪುರ್ ಪೊಲೀಸ್ ವರಿಷ್ಠಾಧಿಕಾರಿ ಚಕ್ರೇಶ್ ಮಿಶ್ರಾ, “ಅನುರಾಗ್ ಸಿಂಗ್ ಎಂಬ 45 ವರ್ಷದ ಮಾನಸಿಕ ಅಸ್ವಸ್ಥನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ತನ್ನ ಕುಟುಂಬದ ಐವರು ಸದಸ್ಯರನ್ನು ಹತ್ಯೆಗೈದಿದ್ದಾನೆ ಎಂಬ ಮಾಹಿತಿ ಇಂದು ಪಲಪುರ್ ಗ್ರಾಮದಿಂದ ಬಂದಿದೆ. ತನಿಖೆಯ ಸಂದರ್ಭದಲ್ಲಿ ಆತ ತನ್ನ 40 ವರ್ಷದ ಪತ್ನಿ, 65 ವರ್ಷದ ತಾಯಿ ಹಾಗೂ ಕ್ರಮವಾಗಿ 12, 9 ಹಾಗೂ 6 ವರ್ಷದ ಮೂವರು ಮಕ್ಕಳನ್ನು ಹತ್ಯೆಗೈದಿರುವುದು ಕಂಡು ಬಂದಿದೆ. ಈ ಕುರಿತು ಪೊಲೀಸರು ಹಾಗೂ ವಿಧಿ ವಿಜ್ಞಾನ ತಜ್ಞರ ತಂಡವು ತನಿಖೆ ನಡೆಸುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here