ಪಾವಗಡ , ಮೇ 29: ಕುಡಿದ ಮತ್ತಿನಲ್ಲಿ ಕೆಪಿಟಿಸಿಎಲ್ ಎಂಜಿನಿಯರ್ಗಳ ಹೊಡೆದಾಡಿಕೊಂಡು ತೀವ್ರ ಗಾಯಗಳಾಗಿರುವ ಘಟನೆ ಪಾವಗಡ ತಾಲೂಕಿನಲ್ಲಿ ನಡೆದಿದೆ.
ಕಳೆದ ಭಾನುವಾರ ಪಟ್ಟಣದ ಹೊರವಲಯ ದಲ್ಲಿ ನಾಲ್ವರು ನೌಕರರು ಕೆಲಸಕ್ಕೆ ತೆರಳದೆ ಎಣ್ಣೆ ಪಾರ್ಟಿ ಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ತೀವ್ರವಾಗಿ ಹೊಡೆದಾಡುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಪಿಟಿಸಿಎಲ್ ಜೂನಿಯರ್ ಇಂಜಿನಿಯರ್ ಗಳಾದ ಶ್ರೀನಿವಾಸ್,ವಾದಿರಾಜ್ , ಬೆಸ್ಕಾಂ ಸಿಬ್ಬಂದಿ ನರಸಿಂಹಮೂರ್ತಿ ಮತ್ತು ಸಂತೋಷ್ ನಡುವೆ ಜಗಳ ನಡೆದಿದೆ ಎನ್ನಲಾಗಿದೆ.
ಬಟ್ಟೆ ಬಿಚ್ಚಿಕೊಂಡು ಬೀದಿ ರೌಡಿಗಳಂತೆ ಹೊಡೆದಾಡಿಕೊಂಡಿದ್ದರೂ, ಘಟನೆ ಬಗ್ಗೆ ಈವರೆಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.
ಕೆಲಸಕ್ಕೆ ಕುತ್ತು ಬರಬಹುದು ಎಂಬ ಭೀತಿಯಿಂದ ಗಾಯದ ನೋವಿನಲ್ಲೇ ನಾಲ್ವರೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಸದ್ಯ ನಾಲ್ವರಿಗೂ ಮೇಲಾಧಿಕಾರಿಗಳು ನೋಟಿಸ್ ಕೊಟ್ಟು ಕಾರಣ ಕೇಳಿದ್ದಾರೆ ಎಂದು ತಿಳಿದು ಬಂದಿದೆ.