Home Uncategorized ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಪಾರುಪತ್ಯ; ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು ಸತ್ಯ

ತೆರಿಗೆ ಹಂಚಿಕೆಯಲ್ಲಿ ಕೇಂದ್ರದ ಪಾರುಪತ್ಯ; ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಿದ್ದು ಸತ್ಯ

10
0

ಉತ್ತರ ಭಾರತದ ಬಿಹಾರ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಉತ್ತರಪ್ರದೇಶ ರಾಜ್ಯಗಳ ಮೊದಲ ಇಂಗ್ಲಿಷ್ ಅಕ್ಷರಗಳನ್ನು ಸೇರಿಸಿ BIMARU ರಾಜ್ಯಗಳೆಂದು ಕರೆಯಲಾಗುತ್ತದೆ. ಹಿಂದಿಯಲ್ಲಿ ಬಿಮಾರು ರಾಜ್ಯಗಳೆಂದರೆ ರೋಗಗ್ರಸ್ತ ರಾಜ್ಯಗಳು ಎಂದೇ ಅರ್ಥ. ಹೀಗೆ ಕರೆಯುವುದಕ್ಕೆ ಅನ್ವರ್ಥಕವಾಗಿ ಈ ರಾಜ್ಯಗಳು ಆರ್ಥಿಕವಾಗಿ ಬಡತನದಲ್ಲಿರುವ, ಅಭಿವೃದ್ಧಿಯಲ್ಲಿ ಹಿಂದಿರುವ ರಾಜ್ಯಗಳು ಎಂದು ಪರಿಗಣಿಸಲಾಗುತ್ತದೆ. ಈ ಮಾನದಂಡಗಳ ಲೆಕ್ಕದಲ್ಲಿ ಕೇಂದ್ರ ಸರಕಾರಕ್ಕೆ ಈ ರಾಜ್ಯಗಳಿಂದ 100 ರೂ. ತೆರಿಗೆ ಸಂದಾಯವಾದರೆ ಅದಕ್ಕೆ ಪ್ರತಿಯಾಗಿ ಬಿಹಾರಕ್ಕೆ 922.5 ರೂ.ಗಳನ್ನೂ, ಮಧ್ಯಪ್ರದೇಶಕ್ಕೆ 279.1 ರೂ.ಗಳನ್ನೂ, ರಾಜಸ್ಥಾನಕ್ಕೆ 154.1 ರೂ. ಹಾಗೂ ಉತ್ತರ ಪ್ರದೇಶಕ್ಕೆ 333.2 ರೂ.ಗಳನ್ನು ಕೇಂದ್ರ ಸರಕಾರ ಹಂಚಿಕೆ ಮಾಡಬೇಕೆಂದು 15ನೇ ಕೇಂದ್ರ ಹಣಕಾಸು ಆಯೋಗ ನಿಗದಿ ಮಾಡಿದೆ. ಆದರೆ ಕೇಂದ್ರ ಸರಕಾರಕ್ಕೆ ಅತೀ ಹೆಚ್ಚು ತೆರಿಗೆ ಕಟ್ಟುವ ಕರ್ನಾಟಕವು 100 ರೂ. ತೆರಿಗೆ ಕೇಂದ್ರಕ್ಕೆ ಕಟ್ಟಿದರೆ ವಾಪಸ್ ಸಿಗುವುದು ಕೇವಲ 13.9 ರೂ. ಮಾತ್ರ.

ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಣ ಹಂಚಬೇಕು ಎನ್ನುವುದನ್ನು ಸ್ವಾಯತ್ತ ಸಂಸ್ಥೆಯಾದ ಕೇಂದ್ರ ಹಣಕಾಸು ಆಯೋಗ ನಿರ್ಧರಿಸುತ್ತದೆ. ಅದನ್ನು ಮೀರಲು ನಮಗೆ ಸಾಧ್ಯವಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ಫೆ.7 ರಂದು ಸಂಸತ್ತಿನ ಅಧಿವೇಶನದಲ್ಲಿ ಗುಡುಗಿದರು. ಹಾಗಾದರೆ ಐದು ವರ್ಷದ ಅವಧಿಯ ಈ ಫೈನಾನ್ಸ್ ಕಮಿಷನ್‌ನ ಪದಾಧಿಕಾರಿಗಳನ್ನು ಆಯ್ಕೆ ಮಾಡುವವರು ಯಾರು? ಕೇಂದ್ರ ಸರಕಾರ ತಾನೆ. ತಮಗೆ ಅನುಕೂಲ ಆಗುವವರನ್ನು ಬಿಟ್ಟು ವಿರೋಧಿಸುವವರನ್ನು ಯಾವುದಾದರೂ ಸರಕಾರ ಆಯ್ಕೆ ಮಾಡಲು ಸಾಧ್ಯವೇ? ಹೋಗಲಿ, 15ನೇ ಕಮಿಷನ್ ನಲ್ಲಿ ದಕ್ಷಿಣ ಭಾರತದ ರಾಜ್ಯಗಳನ್ನು ಪ್ರತಿನಿಧಿಸುವ ಸದಸ್ಯರೇ ಇಲ್ಲವಾಗಿರುವಾಗ ದಕ್ಷಿಣದ ರಾಜ್ಯಗಳಿಗೆ ನ್ಯಾಯವಾದ ಪಾಲು ಸಿಗಲು ಸಾಧ್ಯವೇ? ಸಾಧ್ಯವಿಲ್ಲ ಎನ್ನುವುದಾದರೆ ಇದು ಅನ್ಯಾಯವಲ್ಲದೇ ಮತ್ತೇನು?

ಅದಕ್ಕೆ 14ನೇ ಕಮಿಷನ್ ಕೇಂದ್ರ ಸರಕಾರ ಸಂಗ್ರಹಿಸಿದ ಒಟ್ಟು ತೆರಿಗೆಯಲ್ಲಿ 4.71ನ್ನು ಕರ್ನಾಟಕಕ್ಕೆ ಹಂಚಿಕೆ ಮಾಡಬೇಕೆಂದು ಆದೇಶಿಸಿದ್ದರೆ ಈ 15ನೇ ಕಮಿಷನ್ ಅದರಲ್ಲೂ ಖೋತಾ ಮಾಡಿ ಶೇ. 3.62 ಹಂಚಿಕೆ ಮಾಡಲು ಆದೇಶಿಸಿತು. ಇದು ಅನ್ಯಾಯವಲ್ಲವೇ? ಕೇಂದ್ರ ಮತ್ತು ರಾಜ್ಯಗಳ ಪಾಲನ್ನು 14ನೇ ಹಣಕಾಸು ಆಯೋಗ 58:42 ಅನುಪಾತ ಎಂದು ನಿಗದಿಪಡಿಸಿದ್ದರೆ ಈ 15ನೇ ಆಯೋಗ ರಾಜ್ಯದ ಪಾಲಿನಲ್ಲೂ ಶೇ. 1 ಕಡಿಮೆ ಮಾಡಿ 59:41 ಅನುಪಾತದಲ್ಲಿ ಕೇಂದ್ರಕ್ಕೆ ಹಂಚಿತು. ಯಾಕೆ ಹೀಗೆಂದು ಕೇಳಿದರೆ ನಾವು 1971ರ ಜನಗಣತಿ ಬದಲು 2011ರ ಜನಗಣತಿಯನ್ನು ಪರಿಗಣಿಸಿದ್ದೇವೆಂಬ ಉತ್ತರ ಸಿದ್ಧವಾಗಿತ್ತು. ಹೀಗಾಗಿ 15ನೇ ಹಣಕಾಸು ಆಯೋಗ ಸಂಪೂರ್ಣವಾಗಿ ಕೇಂದ್ರ ಸರಕಾರದ ನಿಯಂತ್ರಣದಲ್ಲಿದೆ ಎಂಬ ಸಂದೇಹ ಬಲವಾಗತೊಡಗಿತು.

ಇಷ್ಟಕ್ಕೂ ತೆರಿಗೆ ಹಂಚಿಕೆಯ ಮಾನದಂಡಗಳೇ ಔಟ್ ಡೇಟೆಡ್ ಆಗಿವೆ. ರಾಜ್ಯಗಳ ಜನಸಂಖ್ಯೆ, ವಿಸ್ತೀರ್ಣ, ಅರಣ್ಯ ಪ್ರದೇಶ ಮತ್ತು ತಲಾದಾಯಗಳ ಲೆಕ್ಕದಲ್ಲಿ ಯಾವ ರಾಜ್ಯಕ್ಕೆ ಎಷ್ಟು ತೆರಿಗೆ ಹಂಚಿಕೆ ಎಂದು ನಿರ್ಧರಿಸಲಾಗುತ್ತದೆ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನಸಂಖ್ಯೆಯನ್ನು ನಿಯಂತ್ರಿಸದ, ಆದಾಯ ಹೆಚ್ಚಿಸುವಂತಹ ಯೋಜನೆಗಳನ್ನು ಕೈಗೊಳ್ಳದೆ ನಿರುದ್ಯೋಗ ಸೃಷ್ಟಿಸಿ ತಲಾದಾಯ ಕಡಿಮೆ ಮಾಡಿಕೊಂಡ ಉತ್ತರ ಭಾರತದ ರಾಜ್ಯಗಳು ತೆರಿಗೆಯಲ್ಲಿ ಹೆಚ್ಚಿನ ಪಾಲನ್ನು ಪಡೆಯುತ್ತಲೇ ಇವೆ. ಶಿಕ್ಷಣ ವ್ಯವಸ್ಥೆ, ಕೈಗಾರಿಕೆ ಸ್ಥಾಪನೆಗಳ ಮೂಲಕ ನಿರುದ್ಯೋಗವನ್ನು ನಿಯಂತ್ರಿಸಿದ ದಕ್ಷಿಣ ರಾಜ್ಯಗಳು ಅತೀ ಕಡಿಮೆ ತೆರಿಗೆ ಪಾಲನ್ನು ಪಡೆಯುತ್ತಿವೆ. ಉತ್ತರದ ರಾಜ್ಯಗಳ ಅರಾಜಕ ವ್ಯವಸ್ಥೆಯ ಭಾರವನ್ನು ಇನ್ನೂ ಎಷ್ಟು ಕಾಲ ದಕ್ಷಿಣದ ರಾಜ್ಯಗಳು ಹೊರಬೇಕು. ಸರ್ವರಿಗೂ ಸಮಪಾಲು ಸಮಬಾಳು ಬರಬೇಕೆಂದರೆ ಇನ್ನೂ ಎಷ್ಟು ದಶಕಗಳ ಕಾಲ ದಕ್ಷಿಣದ ರಾಜ್ಯಗಳು ಕಾಯಬೇಕು?

ಫೆ. 9ರಂದು ಲಕ್ನೋದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮಾತಾಡುತ್ತಾ ‘‘ರಾಜಕೀಯ ಕಾರಣಗಳಿಂದ ಉತ್ತರಪ್ರದೇಶವನ್ನು ಬಿಮಾರು ರಾಜ್ಯವೆಂದು ಬಿಂಬಿಸಲಾಗುತ್ತದೆ. ರಾಜ್ಯವು ಈಗ ಈ ಶ್ರೇಣಿಯನ್ನು ಮೀರಿ ಬೆಳದಿದೆ. ಯುಪಿ ಈಗ ದೇಶದಲ್ಲಿ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆದಿದೆ’’ ಎಂದು ಹೆಮ್ಮೆಯಿಂದ ಪ್ರತಿಪಾದಿಸಿದರು. ಯೋಗಿಯವರು ಹೇಳುವುದು ನಿಜವೇ ಆಗಿದ್ದರೆ ಆ ರಾಜ್ಯ ಕಟ್ಟುವ 100 ರೂ. ಕೇಂದ್ರ ತೆರಿಗೆಯ ಬದಲಾಗಿ 333.2 ರೂ. ಪಡೆಯುತ್ತಿರುವುದಾದರೂ ಯಾಕೆ? ಸಂಗ್ರಹವಾಗುತ್ತಿರುವ ಆದಾಯಕ್ಕಿಂತಲೂ ಮೂರುಪಟ್ಟು ಹೆಚ್ಚು ಹಣವನ್ನು ಯುಪಿಗೆ ಹಂಚಿಕೆ ಮಾಡಿದ ಹಣಕಾಸು ಆಯೋಗದ ಮಾನದಂಡದಲ್ಲಿ ಎಂತಹ ದೋಷವಿದೆ? ಈ ಹಣಕಾಸು ಆಯೋಗದ ಹಂಚಿಕೆಯನ್ನು ಸಮರ್ಥಿಸಿಕೊಳ್ಳುವ ನಿರ್ಮಲಾ ಸೀತಾರಾಮನ್‌ರವರಿಗೆ ಆತ್ಮಸಾಕ್ಷಿ ಇದೆಯೇ? ಆರ್ಥಿಕವಾಗಿ ಬಲಿಷ್ಠವಾಗಿರುವ ಯುಪಿ ರಾಜ್ಯಕ್ಕೆ ಮೂರುಪಟ್ಟು ತೆರಿಗೆ ಹಣ ಹಂಚಿಕೆ ಮಾಡಿದ ಹಣಕಾಸು ಆಯೋಗದ ವಿಶ್ವಾಸಾರ್ಹತೆಯೇ ಪ್ರಶ್ನಾರ್ಹವಾಗಿರುವಾಗ ತಾರತಮ್ಯದಿಂದ ಕೂಡಿದ ಅದರ ಹಂಚಿಕೆ ನಿರ್ಧಾರಗಳಿಗೆ ಬೆಲೆ ಎಲ್ಲಿದೆ?

ಹೋಗಲಿ, ಅಭಿವೃದ್ಧಿಯಲ್ಲಿ ಮೋದೀಜಿಯವರ ತವರು ರಾಜ್ಯ ಗುಜರಾತ್ ದೇಶದಲ್ಲೇ ನಂಬರ್ ಒನ್ ಎಂದು ಬಿಜೆಪಿ ಪ್ರಚಾರ ಮಾಡುತ್ತಲೇ ಇದೆ. ಅದಕ್ಕೆ ‘ಗುಜರಾತ್ ಮಾಡೆಲ್’ ಎಂದೇ ದೇಶವನ್ನು ನಂಬಿಸಲು ಸಂಘ ಪರಿವಾರ ಪ್ರಯತ್ನಿಸುತ್ತಿದೆ. ಗುಜರಾತಿನ ವ್ಯಾಪಾರಿಗಳು ದೇಶದಾದ್ಯಂತ ವ್ಯಾಪಾರ ವಹಿವಾಟನ್ನು ಮಾಡುತ್ತಿದ್ದು ಈ ರಾಜ್ಯ ಆರ್ಥಿಕವಾಗಿ ಶಕ್ತಿಯುತ ಎಂದು ಹೇಳಲಾಗುತ್ತದೆ. ಆದರೆ ಫೈನಾನ್ಸ್ ಕಮಿಷನ್ ಮಾತ್ರ ಗುಜರಾತನ್ನೂ ಬಡ ರಾಜ್ಯವೆಂದು ಪರಿಗಣಿಸಿ ನೂರು ರೂಪಾಯಿ ಬದಲಿಗೆ 31.3 ರೂ. ಹಂಚಿಕೆ ಮಾಡುತ್ತಿದೆ. ಅಂದರೆ ಕರ್ನಾಟಕಕ್ಕಿಂತಲೂ 17.4 ರೂ. ಹಣ ಗುಜರಾತಿಗೆ ಹಂಚಿಕೆ ಮಾಡಲಾಗುತ್ತಿದೆ. ನಂ. ವನ್ ಅಭಿವೃದ್ಧಿಯ ಗುಜರಾತ್ ಮಾಡೆಲ್‌ಗೆ ಯಾಕೆ ಹೆಚ್ಚಿನ ಹಣದ ಹಂಚಿಕೆ? ಎಂದು ಪ್ರಶ್ನಿಸುವವರು ದೇಶದ್ರೋಹಿಗಳಾಗುತ್ತಾರೆ.

ಈ ರೀತಿಯ ಕೆಲವಾರು ಉದಾಹರಣೆಗಳ ಮೂಲಕ ಅರ್ಥವಾಗುವುದೇನೆಂದರೆ 14 ಮತ್ತು 15ನೇ ಹಣಕಾಸು ಆಯೋಗವೇ ಕೇಂದ್ರ ಸರಕಾರದ ಕೈಗೊಂಬೆಯಾಗಿದೆ. ಸ್ವಾಯತ್ತತೆ ಎಂಬುದು ಹೆಸರಿಗಷ್ಟೇ. ಆದರೆ ತಮ್ಮ ಮಾತು ಕೇಳುವವರನ್ನೇ ಬಿಜೆಪಿ ಸರಕಾರ ಆಯೋಗಕ್ಕೆ ನೇಮಕ ಮಾಡಿ ತಮಗೆ ಬೇಕಾದ ರಾಜ್ಯಗಳಿಗೆ ಹೆಚ್ಚು ತೆರಿಗೆ ಹಣ ಹಂಚಿಕೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ದಕ್ಷಿಣ ಭಾರತದ ರಾಜ್ಯಗಳು ದುಡಿದುಡಿದು ಹೆಚ್ಚೆಚ್ಚು ತೆರಿಗೆ ಕಟ್ಟಿ ಉತ್ತರ ಭಾರತದ ರಾಜ್ಯಗಳಿಗೆ ಕೊಡುವಂತಾಗಿದೆ.

LEAVE A REPLY

Please enter your comment!
Please enter your name here