ತೆಲಂಗಾಣ: ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ತೆಲಂಗಾಣ ರಾಜ್ಯದಲ್ಲಿ ವೈದ್ಯಕೀಯ ಮೂಲಸೌಕರ್ಯಗಳನ್ನು ಅಭಿವೃದ್ದಿಪಡಿಸಲು ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ (kishan reddy) ಹೇಳಿದ್ದಾರೆ.
ಈ ಕುರಿತು ಇಂದು (ಡಿ.14) ಮಾತನಾಡಿದ ಅವರು ಹೈದರಾಬಾದ್ ಬಳಿಯ ಬೀಬಿನಗರದಲ್ಲಿ 1,028 ಕೋಟಿ ರೂ ವೆಚ್ಚದಲ್ಲಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (AIIMS) ಸ್ಥಾಪಿಸಲು ನಿರ್ಧರಿಸಲಾಗಿದೆ. ಈಗಾಗಲೆ 800 ಕೋಟಿ ರೂ ಮೊತ್ತದ ಕಾಮಗಾರಿ ಪ್ರಾರಂಭವಾಗಿದೆ ಎಂದು ತಿಳಿಸಿದರು.
ಏಮ್ಸ್ 720 ಹಾಸಿಗೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, 30 ಹಾಸಿಗೆ ಆಯುಷ್ ಆಸ್ಪತ್ರೆ, ಎಂಬಿಬಿಎಸ್ (MBBS) ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಗಾಗಿ (Nursing Students) ಕಾಲೇಜು, ವಸತಿ ನಿಲಯ, ಸಿಬ್ಬಂದಿ ಕ್ವಾರ್ಟರ್ಸ್ ನಿರ್ಮಾಣವಾಗಲಿದೆ. ಜೊತೆಗೆ 650 ಆಸನಗಳು ಹೊಂದಿರುವ ಸಭಾಂಗಣ, ಕಾನ್ಫರೆನ್ಸ್ ಹಾಲ್, ಹೊರ ರೋಗಿಗಳ ವಿಭಾಗ (OPD) ತಯಾರಾಗುತ್ತದೆ. ಈಗ ವಿದ್ಯಾರ್ಥಿಗಳಿಗಾಗಿ ತರಗತಿಗಳು ಮತ್ತು ಸಾರ್ವಜನಿಕರಿಗಾಗಿ ಹೊರ ರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದೆ ಎಂದರು.
ಸನತ್ ನಗರದ ಇಎಸ್‌ಐಸಿ ಆಸ್ಪತ್ರೆಯಲ್ಲಿ ಹೊಸ ಒಪಿಡಿ ನಿರ್ಮಾಣ ಮತ್ತು ಸುಧಾರಿತ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು 1,032 ಕೋಟಿ ರೂ.ಗಳನ್ನು ನೀಡಲಾಗುವುದು. ಮತ್ತು ಪ್ರಧಾನ ಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆಯಡಿ ಆದಿಲಾಬಾದ್‌ನ ರಿಮ್ಸ್ ಮತ್ತು ವಾರಂಗಲ್‌ನ ಕಾಕತೀಯ ವೈದ್ಯಕೀಯ ಕಾಲೇಜಿಗೆ ಪ್ರತಿ 120 ಕೋಟಿ ರೂ.ನಂತೆ ಒಟ್ಟು 240 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ ಹೊಸ ವೈದ್ಯಕೀಯ ಆಸ್ಪತ್ರೆ, ಆಪರೇಷನ್ ಥಿಯೇಟರ್‌ಗಳು ಮತ್ತು ತೀವ್ರ ನಿಗಾ ಘಟಕಗಳಂತಹ ಸುಧಾರಿತ ವೈದ್ಯಕೀಯ ಸೌಲಭ್ಯಗಳನ್ನು ನೀಡಲಾಗಿದೆ. ಹಾಗೇ 150 ರಿಂದ 250 ಹೆಚ್ಚುವರಿ ಹಾಸಿಗೆಗಳ, 8 ರಿಂದ 10 ಸೂಪರ್ ಸ್ಪೆಷಾಲಿಟಿ ವಿಭಾಗಗಳು ಮತ್ತು ಸುಮಾರು 15 ಹೆಚ್ಚುವರಿ ಪಿಜಿ ಸೀಟುಗಳ ಹಂಚಿಕೆಯನ್ನು ಹೆಚ್ಚಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ