Home ಕರ್ನಾಟಕ ತೈಲ ದರ ಏರಿಕೆ ಖಂಡಿಸಿ ನಾಳೆ(ಜೂ.17) ಬಿಜೆಪಿಯಿಂದ ಪ್ರತಿಭಟನೆ

ತೈಲ ದರ ಏರಿಕೆ ಖಂಡಿಸಿ ನಾಳೆ(ಜೂ.17) ಬಿಜೆಪಿಯಿಂದ ಪ್ರತಿಭಟನೆ

19
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ನಾಳೆ(ಜೂ.17) ರಾಜ್ಯಾದ್ಯಂತ ಬಿಜೆಪಿ ಪಕ್ಷದ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮಾಜಿ ಡಿಸಿಎಂ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಇದರ ವಿರುದ್ಧ ಸೋಮವಾರ ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಿದ್ದೇವೆ. ಪ್ರಮುಖವಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನ ಮೈದಾನದಲ್ಲಿ ರಾಜ್ಯ ನಾಯಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

ಕಾಂಗ್ರೆಸ್ ಸರಕಾರವು ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ ನೀರಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಮಾಡಿದೆ. ವಾಹನಗಳ ತೆರಿಗೆ, ಆಸ್ತಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸಾಲ ಪಡೆಯಲು ಬ್ಯಾಂಕಿಗೆ ಹೋದರೆ ರಿಜಿಸ್ಟ್ರೇಶನ್ ದರವನ್ನೂ ಹೆಚ್ಚಿಸಲಾಗಿದೆ ಎಂದು ದೂರಿದರು.

ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು, ಚುನಾವಣೆ ವೇಳೆ ಬೆಲೆ ಇಳಿಸುವ ಭರವಸೆ ಕೊಟ್ಟಿದ್ದರು. ಇದೀಗ ರಾಜ್ಯದ ಜನತೆಗೆ ಕಾಂಗ್ರೆಸ್ಸಿನವರದು ಬೆಲೆ ಏರಿಕೆಯ ಗ್ಯಾರಂಟಿ ಎಂದ ಅವರು, ಹಿಂದೆ ಒಂದು ರೂ. ಹೆಚ್ಚಳ ಮಾಡಿದ್ದಾಗ ಹಣಕಾಸು ಸಚಿವ, ಆರ್ಥಿಕ ತಜ್ಞರಾಗಿ ಸಿದ್ದರಾಮಯ್ಯ ಅವರು ಎಲ್ಲ ವಸ್ತುಗಳ ಬೆಲೆ ಏರಿಕೆ ಆಗಲಿದೆ ಎಂದು ಪ್ರಬಲವಾಗಿ ವಿರೋಧಿಸಿದ್ದರು. ಈಗ ಯಾವ ರೀತಿ ಇವರು ಸಮಜಾಯಿಷಿ ಕೊಡುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಆಡಳಿತ ನಡೆಸುವ ಹರಿಯಾಣ ರಾಜ್ಯದಲ್ಲಿ 95.54 ರೂ., ಉತ್ತರ ಪ್ರದೇಶದಲ್ಲಿ 94.55 ರೂ., ಗುಜರಾತ್ 94.50 ರೂ., ಅಸ್ಸಾಂ 97 ರೂ., ದರ ಇದೆ. ಆದರೆ, ಕಾಂಗ್ರೆಸ್ ಆಡಳಿತ ಮಾಡುವ ರಾಜ್ಯಗಳಲ್ಲಿ 103 ರೂ., 107 ರೂ., ತೆಲಂಗಾಣದಲ್ಲಿ 109.50 ರೂ., ಬಿಜೆಪಿಯೇತರ ಆಡಳಿತ ಇರುವ ಕೇರಳದಲ್ಲಿ 105.68 ರೂ., ದರ ಇದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಕಾರ್ಯದರ್ಶಿ ತಮ್ಮೇಶ್ ಗೌಡ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್ ಸೇರಿದಂತೆ ಪ್ರಮುಖರಿದ್ದರು.

LEAVE A REPLY

Please enter your comment!
Please enter your name here